“ಕೆಂಡಸಂಪಿಗೆ’ ಸಿನಿಮಾದ ಖ್ಯಾತಿಯ ವಿಕ್ಕಿ ವರುಣ್ ಈಗ “ಕಾಲಾಪತ್ಥರ್’ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸದ್ಯ ವಿಕ್ಕಿ ವರುಣ್ ನಟಿಸಿ, ನಿರ್ದೇಶಿಸಿರುವ “ಕಾಲಾಪತ್ಥರ್’ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದ್ದು, ಇತ್ತೀಚೆಗೆ “ಸೌಂಡ್ಸ್ ಆಫ್ ಕಾಲಾಪತ್ಥರ್’ ಎಂಬ ಹೆಸರಿನಲ್ಲಿ “ಕಾಲಾಪತ್ಥರ್’ ಸಿನಿಮಾದ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಸಂಗೀತ ನಿರ್ದೇಶಕ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ಕಾಲಾಪತ್ಥರ್’ ಸಿನಿಮಾದ ಐದು ಹಾಡುಗಳನ್ನು ಸೇರಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್’ ಎಂಬ ಹಾಡುಗಳ ಗುತ್ಛವನ್ನು ಸೃಷ್ಟಿಸಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ಸಿನಿಮಾದ ಹಾಡುಗಳನ್ನು ತೋರಿಸುವ ವಿಭಿನ್ನ ಪ್ರಯತ್ನವನ್ನು ಮಾಡಿದೆ ಚಿತ್ರತಂಡ.
ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ವಿಕ್ಕಿ ವರುಣ್, “ನಿರ್ದೇಶಕನಾಗಬೇಕು ಎಂಬುದು ಹಲವು ವರ್ಷಗಳ ಕನಸು. ಆ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ನಿರ್ದೇಶಕ ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವವಿದ್ದಿದ್ದರಿಂದ ನಿರ್ದೇಶನ ಅಷ್ಟು ಕಷ್ಟವಾಗಲಿಲ್ಲ. ಆದರೆ ನಿರ್ದೇಶನ ಹಾಗೂ ನಟನೆ ಎರಡು ಒಟ್ಟಿಗೆ ಮಾಡುವುದು ಸ್ವಲ್ಪ ಕಷ್ಟವಾಗಿತ್ತು. ಆದರೆ ನಮ್ಮ ತಂಡದ ಸಹಕಾರದಿಂದ “ಕಾಲಾಪತ್ಥರ್’ ನಾವು ಅಂದುಕೊಂಡಂತೆ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾದ ಪ್ರಮೋಶನ್ಸ್‌ನಲ್ಲಿ ಏನಾದರೂ ಹೊಸತು ಮಾಡಬೇಕೆಂಬ ಕಾರಣಕ್ಕೆ “ಸೌಂಡ್ಸ್ ಆಫ್ ಕಾಲಾಪತ್ಥರ್’ ಕಾನ್ಸೆಪ್ಟ್ನಲ್ಲಿ ಹಾಡುಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದೇವೆ. “ಕಾಲಾಪತ್ಥರ್’ ಶೀರ್ಷಿಕೆ ಬಗ್ಗೆ ಹೇಳಿದರೆ, ಇಡೀ ಸಿನಿಮಾದ ಕಥೆ ಬಿಟ್ಟುಕೊಟ್ಟಂತಾಗುತ್ತದೆ. ಹಾಗಾಗಿ ಸಿನಿಮಾ ನೋಡಿಯೇ ತಿಳಿಯುವುದು ಒಳ್ಳೆಯದು’ ಎಂದರು.
“ಕಾಲಾಪತ್ಥರ್’ ಸಿನಿಮಾದಲ್ಲಿ ಧನ್ಯಾ ರಾಮಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, “ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಾನು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಗಂಗಾ ಎಂಬ ಹೆಸರಿನ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಚೆನ್ನಾಗಿ ಬಂದಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
“ಭುವನ್ ಮೂವೀಸ್’ ಬ್ಯಾನರಿನಲ್ಲಿ ಸುರೇಶ್ ಮತ್ತು ನಾಗರಾಜು ಜಂಟಿಯಾಗಿ ನಿರ್ಮಿಸಿರುವ “ಕಾಲಾಪತ್ಥರ್’ ಸಿನಿಮಾದ ಹಾಡುಗಳಿಗೆ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ.