ಪಿರಿಯಾಪಟ್ಟಣ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಜಿ. ಮಾದೇಗೌಡರಿಗೆ ಮತ ನೀಡಿ ಗೆಲ್ಲಿಸುವಂತೆ ಮಾಜಿ ಶಾಸಕ ಕೆ.ವೆಂಕಟೇಶ್ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು ಸೇರಿದಂತೆ ನಾನಾ ಭಾಗಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇರುವ ಮೂರು ಅಭ್ಯರ್ಥಿಗಳ ಪೈಕಿ ಮಧು ಮಾದೇಗೌಡ ವಿದ್ಯಾವಂತರು. ಇವರು ಸಾಕಷ್ಟು ಜನ ಸೇವೆ, ಗ್ರಾಮಿಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸಿ ಅನುಭವ ಹೊಂದಿದ್ದಾರೆ.
ಸಾರ್ವಜನಿಕ ಸೇವೆಯ ಕುಟುಂಬದ ಹಿನ್ನೆಲೆ ಇದೆ. ಎಲ್ಲಾ ಅರ್ಹತೆ ಮಧು ಮಾದೇಗೌಡ ಹೊಂದಿದ್ದಾರೆ. ಅವರ ಗೆಲುವಿಗಾಗಿ ಪ್ರತಿ, ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಅವರು ಗೆಲ್ಲುವ ವಿಶ್ವಾಸ ಇದೆ ಎಂದರು.
ಕಾವೇರಿ ಕಣಿಯ ರೈತರ ಪರ ಹೋರಾಟ ಮಾಡಿದ ಮಾದೇಗೌಡ ಅವರ ಮಗ ಮಧು ಮಾದೇಗೌಡ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹವರನ್ನ ನಮ್ಮ ಪಕ್ಷ ಅಭ್ಯರ್ಥಿ ಮಾಡಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಸಿಗುತ್ತಿಲ್ಲ. ಯಾವುದೇ ಖಾಲಿ ಹುದ್ದೆಗಳು ಭರ್ತಿ ಆಗ್ತಾ ಇಲ್ಲ. ಪದವೀಧರರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಹಲವರು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಾಕಷ್ಟು ಸಮಸ್ಯೆ ಇವೆ. ಇವರ ಆರ್ಥಿಕ ನೀತಿಯಿಂದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಧಾರ್ಮಿಕ ವಿಚಾರ ಕೆದಕಿ ಕೆಲಸ ಮಾಡುತ್ತಿದ್ದಾರೆ. ಈ ರಾಜ್ಯದ ಅಭಿವೃದ್ಧಿ ಆಗಬೇಕೆಂದಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ. ಇವತ್ತು ಶಿಕ್ಷಣ ಕ್ಷೇತ್ರದಿಂದ ಸಮಸ್ಯೆ ಬಗೆ ಹರಿಸಬೇಕಿದೆ. ಮಾದೇಗೌಡರು ನೇರ ನಿಷ್ಟೂರ ರಾಜಕಾರಣಿ. ಅವರ ಪುತ್ರ ಮಧು ಮಾದೇಗೌಡ ಕೂಡ ನಿಷ್ಠ, ಪ್ರಾಮಾಣಿಕ. ಹಾಗಾಗಿ ಎಲ್ಲಾ ಪದವೀಧರರಿಗೆ ಮನವಿ ಮಾಡ್ತೇವೆ. ಬಿಜೆಪಿ ಸರ್ಕಾರ ಸಾಧನೆ ಶೂನ್ಯ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಚುನಾವಣೆ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ. ಮತದಾರಲ್ಲಿ ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ಪಕ್ಷವು ಯುವಕರನ್ನು ನಂಬಿಸಿ ಮೋಸ ಮಾಡಿದೆ. ಇವರು ಹೊಸ ಉದ್ಯೋಗ ಕೊಡುವುದಿರಲಿ. ಇರುವ ಉದ್ಯೋಗವನ್ನೇ ಕಳೆದುಕೊಳ್ಳುವಂತೆ ಮಾಡಿದ್ದಾರೆ. ನೋಟ್ ಬ್ಯಾನ್ ತಪ್ಪು ಹೆಜ್ಜೆಯಿಂದ ಸಮಸ್ಯೆಯಿಂದ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವರಾಜ್, ಕಾಂಗ್ರೆಸ್ ಮುಖಂಡರಾದ ಪಿ.ಮಹದೇವ್, ಎ.ಕೆ.ಗೌಡ, ಜೆ.ಮೋಹನ್ ಸೇರಿದಂತೆ ಸಂಸ್ಥೆಯ ಉಪನ್ಯಾಸಕ ವರ್ಗ ಮತ್ತು ಸಿಬ್ಬಂದಿಗಳು ಹಾಜರಿದ್ದರು.