ಕಲಬುರಗಿ: ದಿನೇ-ದಿನೇ ಹೆಚ್ಚಳವಾಗುತ್ತಿರುವ ಮಹಾನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ ಟ್ರಾಫಿಕ್ ನಿರ್ವಹಣಾ ಕೇಂದ್ರ ಅಸ್ತಿತ್ವ ಬರಲಿದೆ. ಈಗಾಗಲೇ ಬೆಂಗಳೂರು- ಬೆಳಗಾವಿದಲ್ಲಿ ಬಿ ಟ್ರ್ಯಾಕ್, ತುಮಕೂರಿನಲ್ಲಿ ಟಿ ಟ್ರ್ಯಾಕ್ ಮಾದರಿಯಂತೆ ಕಲಬುರಗಿಯಲ್ಲೂ ಕೆ ಟ್ರ್ಯಾಕ್ ಟ್ರಾಫಿಕ್ ಸುಧಾರಣೆಗೆ ಕಲಬುರಗಿ ಟ್ರ್ಯಾಕ್ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ 2017-18ನೇ ಸಾಲಿನ ಬಜೆಟ್‌ನಲ್ಲಿ 2 ಕೋಟಿ ರೂ. ತೆಗೆದಿರಿಸಿದೆ.
ಅತ್ಯಾಧುನಿಕ ಸಿಗ್ನಲ್, ಸಿಸಿ ಕ್ಯಾಮರಾ ಅಳವಡಿಕೆ, ಹೊಸ ಒನ್‌ವೇ, ಲೈನ್‌ಗಳನ್ನು ಗುರುತಿಸುವ ಹಾಗೂ ಆಟೋಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದು ಸೇರಿದಂತೆ ಇತರ ಸುಧಾರಣೆ ಕ್ರಮಗಳಾಗಲಿವೆ. ಪೊಲೀಸ್ ಆಯುಕ್ತಾಲಯ ಬರಲಿರುವ ಕಲಬುರಗಿ ಮಹಾನಗರದಲ್ಲಿ ದಿನೇ-ದಿನೇ ಹೆಚ್ಚಳವಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆ ಸಂಬಂಧ ಆಧುನಿಕ ನಿಟ್ಟಿನ ಸುಧಾರಣೆಗೆ ಕೆ-ಟ್ರ್ಯಾಕ್ ಯೋಜನೆ ರೂಪಿಸಲಾಗಿದೆ.
ಕೆ-ಟ್ರ್ಯಾಕ್ ಟ್ರಾಫಿಕ್ ಸುಧಾರಣೆಗೆ 5 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದ್ದು, ಉಳಿದ ಮೊತ್ತವನ್ನು ಎಚ್‌ಕೆಆರ್‌ಡಿಬಿ ಹಾಗೂ ಪಾಲಿಕೆಯಿಂದ ಪಡೆಯಲು ಉದ್ದೇಶಿಸಲಾಗಿದೆ. ಈಗ ಕಲಬುರಗಿಯಲ್ಲಿ ವರ್ಷಕ್ಕೆ 2 ಕೋಟಿ ರೂ. ಅಧಿಕ ಮೊತ್ತದ ಸಂಚಾರಿ ನಿಯಮ ಉಲ್ಲಂಘನೆಯಿಂದ ದಂಡ ಸಂಗ್ರಹವಾಗುತ್ತಿದೆ. ದಂಡದಲ್ಲಿ ಶೇ. ಅರ್ಧದಷ್ಟು ಹಣವನ್ನು ಮಹಾನಗರದ ಟ್ರಾಫಿಕ್ ಸುಧಾರಣೆಗೆ ಬಳಸುವ ನಿಟ್ಟಿನಲ್ಲಿ ನಿಯಮ ಸಹ ರೂಪಿಸಲಾಗುತ್ತಿದೆ.
ಟ್ರಾಫಿಕ್ ನಿರ್ವಹಣಾ ಘಟಕವೇ ಎಲ್ಲವನ್ನು ನಿರ್ವಹಿಸಲಿದ್ದು, ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ಚಿತ್ರದ ಆಧಾರದ ಮೇಲೆ ಮನೆಗೆ ದಂಡದ ನೋಟಿಸ್ ಬರಲಿದೆ. ಒಟ್ಟಾರೆ ಈ ಎಲ್ಲವನ್ನು ಅವಲೋಕಿಸಿದರೆ ಮಹಾನಗರ ಟ್ರಾಫಿಕ್ ಸುಧಾರಣೆಗೆ ಅಮೂಲಾಗ್ರ ಬದಲಾವಣೆ ಬರುವುದು ನಿಶ್ಚಿತ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.
20 ಕಡೆ ಟ್ರಾಫಿಕ್ ಅಂಬ್ರೆಲ್ಲಾ ಸ್ಥಾಪನೆ: ಸಂಚಾರಿ ಪೊಲೀಸರು ಸಂಚಾರಿ ಸೇವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಂಬಂಧ ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆಯಲ್ಲಿ ಬಿಸಿಲು ಹಾಗೂ ಮಳೆಯಿಂದ ಸಂರಕ್ಷಿಸುವಂತಾಗಲು ಮಹಾನಗರದ 20 ಕಡೆ ಟ್ರಾಫಿಕ್ ಅಂಬ್ರೆಲ್ಲಾಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗುತ್ತಿದೆ.
ಬೇಸಿಗೆಯಲ್ಲಿ ಸಂಚಾರಿ ಪೊಲೀಸ್ ಪೇದೆಗಳಿಗೆ ಬೆಳಗ್ಗೆ 11:00ರಿಂದ 4:00ರ ವರೆಗೆ ಮರ ಇಲ್ಲದೇ ಹತ್ತಿರದ ನೆರಳಿನಡಿ ನಿಂತು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ. ಅಲ್ಲದೇ ಬೇಸಿಗೆ ಮುಗಿಯುವವರೆಗೂ ಪೊಲೀಸ್ ಇಲಾಖೆಯಿಂದಲೇ ಮಜ್ಜಿಗೆ ನೀಡಲು ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ಈ ವೆಚ್ಚ ಭರಿಸಲು ನಿರ್ಧರಿಸಲಾಗಿದೆ.
ಜೂನ್-ಜುಲೈದಿಂದ ಹೆಲ್ಮೆಟ್ ಕಡ್ಡಾಯ: ಸದ್ಯ ಬೇಸಿಗೆ ಇರುವುದರಿಂದ ಬೈಕ್ ಸವಾರುದಾರರಿಗೆ ಸ್ವಲ್ಪ ರಿಯಾಯಿತಿ ನೀಡಲು ಇಲಾಖೆ ಉದ್ದೇಶಿಸಿದೆ. ಆದರೆ ಜೂನ್ ಕೊನೆ ವಾರದಿಂದ ಇಲ್ಲವೇ ಜುಲೈ ಮೊದಲ ವಾರದಿಂದ ಹೆಲ್ಮೆಟ್ ಕಡ್ಡಾಯ ನಿಯಮ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ.
ಒಟ್ಟಾರೆ ಮುಂದಿನ ದಿನಗಳಲ್ಲಿ ಕೆ ಟ್ರ್ಯಾಕ್ ಟ್ರಾಫಿಕ್ ಸುಧಾರಣೆ ಯೋಜನೆ ಮಹಾನಗರದ ಸಂಚಾರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಲಕ್ಷಣಗಳಿವೆ. ಇದಕ್ಕಾಗಿ ಸ್ವಲ್ಪ ದಿನ ಕಾದು ನೋಡಬೇಕಷ್ಟೇ.
* ಹಣಮಂತರಾವ ಭೈರಾಮಡಗಿ