ಬೆಂಗಳೂರು: ನಿಗಮ-ಮಂಡಳಿ ನೇಮಕಾತಿ ವಿಚಾರದಲ್ಲಿ ಮತ್ತೆ ಸಿದ್ದರಾಮಯ್ಯ ಅವರ ಕೈ ಮೇಲಾಗಿದ್ದು, ತಮ್ಮ ಆಪ್ತ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌ಗೆ ಕೊನೆಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಿರಿ ಸಂಪುಟ ದರ್ಜೆ ಸ್ಥಾನಮಾನದ ಸಹಿತ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇಬ್ಬರು ಶಾಸಕರಿಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ ಭಾಗ್ಯ ಸಿಕ್ಕಿದೆ.
ಈ ಹಿಂದೆ ರಾಹುಲ್ಗಾಂಧಿಯವರೇ ಮಾಲಿನ್ಯ ಮಂಡಳಿಗೆ ಡಾ.ಕೆ.ಸುಧಾಕರ್ ಅವರನ್ನು ನೇಮಿಸಲು ಪಟ್ಟಿ ಬಿಡುಗಡೆ ಮಾಡಿದ್ದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ಆ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಸಿ.ಜಯರಾಮ್ ಅವರನ್ನು ನೇಮಿಸಿದ್ದರು.
ಹೀಗಾಗಿ, ಸುಧಾಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಹಾದಿ ಮುಚ್ಚಿದಂತಾಗಿತ್ತು. ಆದರೆ, ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿ ರಾಹುಲ್ಗಾಂಧಿ ಸಹಿತ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದ ಬೆನ್ನಲ್ಲೇ ಜಯರಾಂ ಅವರಿಂದ ರಾಜೀನಾಮೆ ಕೊಡಿಸಿ ಸುಧಾಕರ್ ನೇಮಕ ಆದೇಶ ಹೊರಬಿದ್ದಿದೆ. ಆದೇಶ ಹೊರಬಿದ್ದ ತಕ್ಷಣ ಸುಧಾಕರ್ ಅಧಿಕಾರವನ್ನೂ ವಹಿಸಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ತಮ್ಮ ಹಿಡಿತ ಹೆಚ್ಚಿಸಿಕೊಂಡಂತಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಜಯರಾಮ್ ಅವರನ್ನು ಮೃಗಾಲಯ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಅವರನ್ನು ಬೆಂಗಳೂರು ಅಂ.ರಾ.ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಉಪ ನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನೇಮಿಸಲಾಗಿದೆ.