ಬೆಂಗಳೂರು: “ವಿಕ್ರಂ’ ಲ್ಯಾಂಡರ್ ಯೋಜನೆಯಂತೆ ಪ್ರದರ್ಶನ ನೀಡಿತ್ತು. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿದ್ದಾಗ ಭೂಮಿಯ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಳೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ವಿಶ್ಲೇಷಣೆ ಮಾಡಬೇಕಾಗಿದೆ’. ಹೀಗೆ ಬರೆದಿಟ್ಟ ಎರಡು ಸಾಲುಗಳನ್ನು ಓದುವಾಗ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಧ್ವನಿ ಗದ್ಗದಿತವಾಗಿತ್ತು. ಅಷ್ಟೇ ಅಲ್ಲ, ಇದನ್ನು ಕೇಳಿಸಿಕೊಳ್ಳುತ್ತಿದ್ದ ಸಿಬ್ಬಂದಿಯ ಕಣ್ಣುಗಳೂ ಒದ್ದೆ ಆಗಿದ್ದವು.
ಈ “ನಿರಾಶಾದಾಯಕ ಹೇಳಿಕೆ’ಯನ್ನು ನೀಡುವ ಮುನ್ನ ಶಿವನ್, ತಮ್ಮ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಜಿ ಅಧ್ಯಕ್ಷರಾದ ಡಾ.ಕೆ.ರಾಧಾಕೃಷ್ಣ, ಎ.ಎಸ್. ಕಿರಣ್ ಕುಮಾರ್, ವಿಜ್ಞಾನಿ ಕಸ್ತೂರಿ ರಂಗನ್ ಅವರಿಂದ ಸಲಹೆ ಪಡೆದರು. ಪ್ರಧಾನಿ ಗಮನಕ್ಕೂ ತಂದರು. ಒಲ್ಲದ ಮನಸ್ಸಿನಿಂದ ಧ್ವನಿವರ್ಧಕದತ್ತ ಹೆಜ್ಜೆ ಹಾಕಿದ ಅಧ್ಯಕ್ಷರು, ಸಂಪರ್ಕ ಕಳೆದುಕೊಂಡಿರುವುದಾಗಿ ಪ್ರಕಟಿಸಿದರು. ಆಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
15 ನಿಮಿಷಗಳ ಕಾಲ ನಡೆಯುವ ವೇಗ ನಿಯಂತ್ರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕ್ಷಣ, ಕ್ಷಣದ ಮಾಹಿತಿ ವೀಕ್ಷಕ ವಿವರಣೆಗಾರರಿಂದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಿತ್ತರವಾಗುತ್ತಿತ್ತು. 13.48 ನಿಮಿಷಗಳವರೆಗೂ ಕ್ರಿಕೆಟ್ ಕಾಮೆಂಟ್ರಿ ರೀತಿಯಲ್ಲಿ ಅವರ ಧ್ವನಿ ಉತ್ಸಾಹದಿಂದ ಕೂಡಿತ್ತು. ಚಂದ್ರನಿಂದ ನೂರಾರು ಕಿ.ಮೀ.ದೂರದಲ್ಲಿದ್ದ ಲ್ಯಾಂಡರ್, ಅಂತಿಮವಾಗಿ ಕೇವಲ 4.43 ಕಿ.ಮೀ.ಅಂತರದಲ್ಲಿತ್ತು.
ಇನ್ನೇನು ಹಗುರ ಸ್ಪರ್ಶ ಆಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಎಲ್ಲ ವಿಜ್ಞಾನಿಗಳು, ವೀಕ್ಷಕ ವಿವರಣೆಗಾರರ ಎದೆಬಡಿತ ಜೋರಾಯಿತು. ಮಾಹಿತಿ ಲಭ್ಯವಾಗದಂತಾಯಿತು. ನಂತರ ಕೆಲವೇ ಸೆಕೆಂಡ್‌ಗಳಲ್ಲಿ ಲ್ಯಾಂಡರ್ ಮತ್ತು ಆರ್ಬಿಟರ್ ಸಂಪರ್ಕಕ್ಕೆ ಬಂತು. ಮತ್ತೆ ಹೋದ ಜೀವ ಬಂದಂತಾಯಿತು. ಕರತಾಡನ ಮೊಳಗಿದವು. ಆದರೆ, ಅದರ ಸದ್ದು ನಿಲ್ಲುವಷ್ಟರಲ್ಲಿ ಸಂಪರ್ಕ ಮತ್ತೆ ಕಡಿತಗೊಂಡಿತು. ಆಗ ಸಂಭ್ರಮದಲ್ಲಿದ್ದ ನಿಯಂತ್ರಣ ಕೊಠಡಿಯಲ್ಲಿ ಸೂತಕದ ಛಾಯೆ ಆವರಿಸಿತು.