ಬಾಗಲಕೋಟೆ: ನಾನು ಮೀಸಲಾತಿ ಪರ ಇರುವ ವ್ಯಕ್ತಿ. ಈಗಾಗಲೇ ಮೀಸಲಾತಿ ಪಡೆದು, ಸಂಸದರು, ಸಚಿವರು, ಶಾಸಕರಾದವರಿಗೆ ಮೀಸಲಾತಿ ಕೊಡುವ ಅಗತ್ಯವಿಲ್ಲ. ಕೆನೆ ಪದರು ಮೀಸಲಾತಿ ಪ್ರತಿಯೊಬ್ಬ ಬಡವರಿಗೆ ಸಿಗಬೇಕು. ಯಾವುದೇ ಮೀಸಲಾತಿ ಪಡೆಯಲು ಒತ್ತಡ ಹಾಕಿದರೆ ಸಿಗಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿಗಾಗಿ ಮಾರ್ಚ್ 4 ಅಂತಿಮ ದಿನ ನೀಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಮಾಜದ ಸ್ವಾಮೀಜಿಗಳು ಧರಣಿ-ಉಪವಾಸ ಸತ್ಯಾಗ್ರಹ ಕುಳಿತುಕೊಳ್ತೀವಿ ಎಂದು ಶುರು ಮಾಡುತ್ತಾರೆ. ಒತ್ತಡದ ಮೂಲಕ ಮೀಸಲಾತಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಬಡವರಿಗೆ ಮೀಸಲಾತಿ ಸಿಗಬೇಕು. ಶ್ರೀಮಂತರು, ಅನೇಕ ವರ್ಷ ಲಾಭ ಪಡೆದವರು ಮೀಸಲಾತಿ ಪಟ್ಟಿಯಿಂದ ಹೋಗಬೇಕು. ಡಾ|ಅಂಬೇಡ್ಕರ್ ಅಪೇಕ್ಷೆ ಅದೇ ದಿಕ್ಕಿನಲ್ಲಿತ್ತು. ಬರುವ ದಿನಗಳಲ್ಲಿಈ ದಿಕ್ಕಿನಲ್ಲಿ ಚಿಂತನೆ ಆಗೋದು ಒಳ್ಳೆಯದು ಎಂದರು. ಎಲ್ಲಾ ಸಮಾಜದವರು ಮೀಸಲಾತಿಗಾಗಿ ಜಾಗೃತರಾಗಿದ್ದಾರೆ. ಇದನ್ನು ಸ್ವಾಗತಿಸುವುದಾಗಿ ತಿಳಿಸಿದರು. ಎಸ್‌ಟಿ ಮೀಸಲಾತಿ, 2ಎ ಮೀಸಲಾತಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಈ ಕುರಿತು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಿಂದ ವರದಿ ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರ ವರದಿ ಏನು ಬರುತ್ತದೆ ನೋಡೋಣ. ಬಳಿಕ ಮುಂದಿನದ್ದು ತೀರ್ಮಾನಿಸಲಾಗುವುದು ಎಂದರು.
ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನಮಗೇನು ಸಂಬಂಧವಿಲ್ಲ. ಮೀಸಲಾತಿ ಪರ ನಾನೊಬ್ಬನೇ ತೀರ್ಮಾನ ತೆಗೆದುಕೊಂಡಿಲ್ಲ. ನಿರಂಜನಾನಂದಪುರಿ, ಈಶ್ವರನಾನಂಪುರಿ ಸ್ವಾಮೀಜಿ ಮೀಸಲಾತಿ ಹೋರಾಟ ಶುರು ಮಾಡಿದ್ದರು. ಮೊದಲು ಶ್ರೀಗಳು ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದರು. ಆಗ ನೀವು ಹೋರಾಟ ಮಾಡಿ, ಬೆಂಬಲ ಕೊಡುತ್ತೇವೆ ಎಂದಿದ್ದರು. ಎಲ್ಲ ಪಕ್ಷದ ಸಮಾಜ ನಾಯಕರು ನಮ್ಮ ಮನೆಗೆ ಬಂದಿದ್ದರು. ಎಲ್ಲ ನಾಯಕರು ಸೇರಿ ಜಗದ್ಗುರುಗಳು ಏನು ತೀರ್ಮಾನ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧ ಎಂದಿದ್ದರು. ಹೀಗಾಗಿ ನಾನೂ ಸಹಕಾರ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಹೋರಾಟಕ್ಕೆ ಬೆಂಬಲ ಕೊಡುತ್ತೇನೆಂದು ಹೋರಾಟಕ್ಕೆ ಬರಲಿಲ್ಲ. ಈ ರೀತಿ ದ್ವಿಮುಖ ನೀತಿ ಏಕೆ ಅನುಸರಿಸಿದರು ಗೊತ್ತಿಲ್ಲ ಎಂದರು.
ಕುರುಬ ಸಮಾಜ ಎಸ್.ಟಿ ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್ ಎಸ್‌ನವರಿದ್ದಾರೆಂದು ಸಿದ್ದರಾಮಯ್ಯ ಹೇಳಿದರು. ಪಾದಯಾತ್ರೆಗೆ ದುಡ್ಡು ಕೊಟ್ಟಿದ್ದಾರೆಂದೂ ಜಗದ್ಗುರುಗಳ ವಿರುದ್ಧವೂ ಟೀಕಿಸಿದರು. ಇದರಿಂದ ನಮಗೆ ಹಾಗೂ ಸಮಾಜದ ಬಾಂಧವರಿಗೆ ನೋವಾಗಿದೆ. ಸ್ವಾಭಾವಿಕವಾಗಿ ಸಿದ್ದರಾಮಯ್ಯ ಬೆಂಬಲ ನೀಡಬೇಕಿತ್ತು. ಏಕೆ ವಿರೋಧಿಸಿದರು.
ಬೆಂಗಳೂರಿನ ಸಮಾವೇಶದಲ್ಲಿ ನಿರೀಕ್ಷೆ ಮೀರಿ ಲಕ್ಷಾಂತರ ಜನ ಸೇರಿದ್ದರು. ಅವರು ಇನ್ನೊಂದು ಸಮಾವೇಶ ಮಾಡುತ್ತಾರೋ, ಬಿಡುತ್ತಾರೋ ಅದು ಅವರಿಗೆ ಬಿಟ್ಟಿದ್ದು. ಮಾಡಬಾರದೆಂದು ನಾನು ಹೇಳಲ್ಲ. ಅದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದರು.