ಶಿವಮೊಗ್ಗ: ತಾನಿಲ್ಲದೆ ಸಮಾವೇಶದಲ್ಲಿ ಲಕ್ಷಾಂತರ ಕುರುಬರು ಸೇರುತ್ತಾರೆಂಬ ಕಲ್ಪನೆ ಸಿದ್ದರಾಮಯ್ಯಗೆ ಇರಲಿಲ್ಲ. ಮೊನ್ನೆ ಬೆಂಗಳೂರಿನಲ್ಲಿ ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಸಮಾವೇಶ ಯಶಸ್ವಿಯಾಗಿದ್ದು ಸಿದ್ದರಾಮಯ್ಯನವರಿಗೆ ಕಿರಿಕಿರಿ ಉಂಟುಮಾಡಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗೆನೆಲೆಯ ಇಬ್ಬರು ಜಗದ್ಗುರುಗಳು ಸಿದ್ದರಾಮಯ್ಯನವರ ಮನೆಗೆ ಹೋಗಿ ಹೋರಾಟಕ್ಕೆ ಆಹ್ವಾನಿಸಿದ್ದರು. ನಾನು ಹೋರಾಟ ಬರುವುದಿಲ್ಲ ನೀವು ಮಾಡಿ ಎಂದಿದ್ದರು. ಅವತ್ತು ಯಾಕೆ ಕುಲಶಾಸ್ತ್ರ ಅಧ್ಯಯನದ ಬಳಿಕ ಹೋರಾಟ ಮಾಡೋಣ ಎಂದು ಸಿದ್ದರಾಮಯ್ಯ ಹೇಳಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದನ್ನೂ ಓದಿ:“ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ”: ತಿರುಗೇಟು ನೀಡಿದ ಸಿದ್ದರಾಮಯ್ಯ
ಪಾದಯಾತ್ರೆ ಬೇಡ, ಸಮಾವೇಶ ಬೇಕಿತ್ತಾ? ಆರ್ ಎಸ್ಎಸ್ ಹಣ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲಾ ಜಗದ್ಗುರುಗಳೇ ಉತ್ತರ ನೀಡಿದ್ದಾರೆ. ತಮ್ಮನ್ನು ಬಿಟ್ಟು ನಡೆದ ಕುರುಬರ ಸಮಾವೇಶದ ಬಗ್ಗೆ ಸಂತೋಷ ಪಡುವ ಬದಲು ರಾಜಕೀಯವಾಗಿ ತಮ್ಮನ್ನು ಬಿಟ್ಟು ಕುರುಬರು ಸೇರಿದ್ದಕ್ಕೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಸಂವಿಧಾನ ಬದ್ದವಾಗಿ ಎಲ್ಲಾ ಸಮಾಜಗಳಿಗೂ ಮೀಸಲಾತಿ ಇರಬೇಕು. ಯಾವುದೇ ಸಮಾಜದ ಮೀಸಲಾತಿ ಕಿತ್ತುಕೊಂಡು ಕೊಡಲು ಆಗುವುದಿಲ್ಲ. ಯಾವುದೇ ಎಸ್ ಟಿ, ಎಸ್ ಸಿ ಜನಾಂಗಕ್ಕೆ ತೊಂದರೆಯಾಗದಂತೆ ಮೀಸಲಾತಿ ತೀರ್ಮಾನ ಆಗುತ್ತದೆ ಎಂದ ಈಶ್ವರಪ್ಪ ಹೇಳಿದರು.