ಶಿವಮೊಗ್ಗ: ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು. ಅವರು ಒಂದು ಪಕ್ಷದ ಹೇಳಿಕೆ ಪರವಾಗಿ ಮಾತನಾಡಿದರೆ ಅವರ ಬಗ್ಗೆ ಗೌರವ ಹೇಗೆ ಉಳಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟಗಾರರು ಪಕ್ಷಾತೀತವಾಗಿರಬೇಕು. ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಹಿಂದಿನಿಂದನೂ ದೊರೆಸ್ವಾಮಿ ಅವರು ಬೆಂಬಲ ನೀಡಿಕೊಂಡೇ ಬಂದಿದ್ದಾರೆ. ಅವರು ಒಂದು ಪಕ್ಷದ ಹೇಳಿಕೆ ಪರವಾಗಿ ಮಾತನಾಡಿದರೆ ಅವರ ಬಗ್ಗೆ ಗೌರವ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ಧ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ಈಶ್ವರಪ್ಪ ಅವರು, ಯತ್ನಾಳ್ ಹೇಳಿಕೆ ವಿರೋಧಿಸಿ ಕಾಂಗ್ರೆಸ್ಸಿಗರು ಪ್ರತಿಭಟನೆ ಆರಂಭಿಸಿದ್ದಾರಂತೆ. ಪ್ರಧಾನಿಯನ್ನು ಸಿದ್ದರಾಮಯ್ಯ ಕೊಲೆಗಡುಕ ಎಂದರು. ಆಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಹೊರಗಡೆ ಹಾಕಬೇಕಿತ್ತು. ಇಂಥ ಕಾಂಗ್ರೆಸ್ಸಿಗರು ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸುತ್ತಾರಂತೆ ಎಂದರು.
ವಿಧಾನಸೌಧದ ಅಧಿವೇಶನ ನಡೆಯಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಅದು ಹೇಗೆ ಅಧಿವೇಶನ ನಡೆಯಲು ಬಿಡುವುದಿಲ್ಲವೋ ನಾನು ನೋಡುತ್ತೇನೆ. ವಿಧಾನಸೌಧ ಅವರ ಸ್ವಂತ ಆಸ್ತಿಯಲ್ಲ. ಕಾಂಗ್ರೆಸ್ಸಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಧಾನಸೌಧವಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದವರ ಬಗ್ಗೆ ಖಂಡನಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯ ಕೆಲಸ ಮುಗಿಯಿತು. ಯತ್ನಾಳ್ ಹೇಳಿಕೆಗೆ ಧರಣಿ ಕೂರುತ್ತೀರಿ ಪಾಕಿಸ್ತಾನ್ ಜಿಂದಾಬಾದ್ ಎಂದವರ ಬಗ್ಗೆ ಒಂದು ಖಂಡನಾ ಹೇಳಿಕೆ ನೀಡುತ್ತೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ಎಷ್ಟು ಜನರಿದ್ದಾರೋ ಗೊತ್ತಿಲ್ಲ. ಇನ್ನೂ ನಿಮಗೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಆಗಿಲ್ಲ. ಇಂಥ ಕಾಂಗ್ರೆಸ್ ಯತ್ನಾಳ್ ವಿರುದ್ಧ ಧರಣಿ ಕೂರುತ್ತದೆಯಂತೆ ಎಂದು ವ್ಯಂಗ್ಯವಾಡಿದರು.
ದೊರೆಸ್ವಾಮಿ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದವರ ವಿರುದ್ಧ ಧರಣಿ ಕೂತಿದ್ದರೆ ನಾವೂ ಅವರಿಗೆ ಬೆಂಬಲ ನೀಡುತ್ತಿದ್ದೆವು. ಅಮೂಲ್ಯ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದೇವೆ. ದೊರೆಸ್ವಾಮಿ ಅವರು ಹಿರಿತನಕ್ಕೆ ತಕ್ಕಂತೆ ಮಾರ್ಗದರ್ಶ ಮಾಡಿದರೆ ನಾವು ಅವರೊಂದಿಗೆ ಇರುತ್ತೇವೆ ಎಂದು ಸಚಿವರು ಅಭಿಪ್ರಾಯಪಟ್ಟರು.