ಶಿವಮೊಗ್ಗ: ನಾನು ಸಮುದಾಯದವರ ಜೊತೆ ಸೇರಿ ಪಾದಯಾತ್ರೆ ಮಾಡಿದರೆ, ನಿಮ್ಮದೇ ಸರ್ಕಾರ ಇದೆ, ಮೀಸಲಾತಿ ಮಾಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಿಮ್ಮ ಸರ್ಕಾರ ಇದ್ದಾಗ ಏನು ಮಂಡಕ್ಕಿ ತಿಂತಾ ಇದ್ರಾ ನೀವು ಎಂದು ಸಚಿವ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಕುಟುಕಿದರು.
ನಗರದಲ್ಲಿ ಮಾತನಾಡಿದ ಅವರು, ಓಟು ತೆಗೆದುಕೊಳ್ಳಲಷ್ಟೇ ನಿಮಗೆ ದಲಿತರು, ಹಿಂದುಳಿದವರು ಬೇಕಾ? ಹಿಂದುಳಿದವರ ನಾಯಕ ಎನಿಸಿಕೊಳ್ಳುವವರು ಹೋರಾಟಕ್ಕೂ ಬರಬೇಕಿತ್ತು. ಅವರು ಯಾಕೆ ಕುರುಬರ ಹೋರಾಟಕ್ಕೆ ಬರಲಿಲ್ಲ ಎನ್ನುವುದೇ ತಿಳಿಯಲಿಲ್ಲ ಎಂದರು.
ಸಮಾವೇಶದಲ್ಲಿ ಸಿದ್ಧರಾಮಯ್ಯ ಭಾಗವಹಿಸಬೇಕಿತ್ತು. ನಮ್ಮ ಪರವಾಗಿ ಸ್ವಾಮಿಜಿ ಮುಂಚೂಣಿಯಲ್ಲಿ ಇರುವುದನ್ನಾದರೂ ಸಿದ್ಧರಾಮಯ್ಯ ಒಪ್ಪಿಕೊಳ್ಳಬೇಕಿತ್ತು. ಅವರ ಮನೆಗೆ ತೆರಳಿ ಸ್ವಾಮಿಜಿಗಳು ಆಹ್ವಾನಿಸಿದ್ದರು. ಆದರೂ, ಅವರು ಬರಲಿಲ್ಲ ಎಂದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ವಿಧೇಯಕ ಮತ್ತೆ ಮತಕ್ಕೆ ಹಾಕಿ: ಸಿಎಂ ಇಬ್ರಾಹಿಂ ಆಗ್ರಹ
ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ಕೃಷಿ ನೀತಿ ಕಾಯ್ದೆ ಬಗ್ಗೆ ಸದನದಲ್ಲಿ ಪ್ರಧಾನಿ ಮೋದಿಯವರು ನಿನ್ನೆ ಪ್ರಸ್ತಾಪಿಸಿದ್ದಾರೆ. ವಿದೇಶಿ ವ್ಯಕ್ತಿಗಳ ಕೈವಾಡ ಇರುವುದು ಬಹಿರಂಗವಾಗುತ್ತಿದೆ. ಈ ಪ್ರತಿಭಟನೆಯನ್ನು ವಿದೇಶಿಯರು ಹೈಜಾಕ್ ಮಾಡಿರುವುದು ಬಹಿರಂಗವಾಗಿದೆ. ಪ್ರಧಾನಿಯಾಗಿದ್ದ ವೇಳೆ ಈ ಕೃಷಿ ಕಾಯ್ದೆ ಬಗ್ಗೆ ಸ್ವತಃ ಮನಮೋಹನ ಸಿಂಗ್ ಪ್ರಸ್ತಾಪ ಮಾಡಿದ್ದರು. ಮಾಜಿ ಪ್ರಧಾನಿ ದೇವೆಗೌಡರು ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ಪ್ರಧಾನಿಯವರು ಈಗ ಪ್ರಸ್ತಾಪಿಸಿದ್ದಾರೆ ಎಂದರು.
ಅಸಲಿಯಾಗಿ ರೈತರು ಈ ಕಾಯ್ದೆಗೆ ಸ್ವಾಗತ ಕೋರಿದ್ದಾರೆ. ವಿದೇಶಿಯರ ಸಂಚನ್ನು ರಾಷ್ಟ್ರ ಭಕ್ತರು ವಿಫಲಗೊಳಿಸಬೇಕು. ಆಂದೋಲನ ಜೀವಿಗಳಿಗೆ ಯಾವುದೇ ಹೋರಾಟ ಇರಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಬಿಲ್ ಪಾಸ್ ಮಾಡುವ ವೇಳೆ ಸುಮ್ಮನಿದ್ದ ವಿಪಕ್ಷಗಳು, ವಿಧ್ವಂಸ ಕೃತ್ಯ ನಡೆಸುತ್ತಿರುವ ವಿದ್ರೋಹಿಗಳ ಪ್ರತಿಭಟನೆ ಪರ ವಹಿಸಿಕೊಂಡು ಮಾತನಾಡುತ್ತಿದ್ದಾರೆ. ರಾಜಕೀಯ ಬಣ್ಣ ಬಳಸಿ, ವಿಪಕ್ಷಗಳು ಸುಮ್ಮನಿರುವುದು ಒಳ್ಳೆಯದಲ್ಲ. ನಿಜವಾದ ಭಾರತೀಯರು, ನಕಲಿ ರೈತರ ಹೋರಾಟಕ್ಕೆ ಬೆಂಬಲಿಸಬಾರದು. ವಿರೋಧಕೋಸ್ಕರ ವಿರೋಧ ಮಾಡುವುದು ಒಳ್ಳೆಯದಲ್ಲ. ಕೃಷಿ ಕಾಯ್ದೆ ರೈತರ ಒಳಿತಿಗಾಗಿ ಇದೆ ಎಂದು ಸಚಿವ ಈಶ್ವರಪ್ಪ ಹೇಳಿದರು.