Advertisement

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಸ್ತೆಯಲ್ಲಿ ವಜ್ರವೈಢೂರ್ಯ ಮಾರಾಟ ಮಾಡ್ತಿದ್ರಾ?: ಈಶ್ವರಪ್ಪ

01:01 PM Feb 02, 2022 | Team Udayavani |

ಶಿವಮೊಗ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಯಲ್ಲಿ ವಜ್ರ ವೈಢೂರ್ಯ ಇಟ್ಟು ಮಾರಾಟ ಮಾಡುತ್ತಿದ್ದರಾ? ಅವರು ಸಾಲ ತಂದಿಲ್ಲವೇ? ಟೀಕೆ ಮಾಡಬೇಕೆಂದೇ ಟೀಕೆ ಮಾಡಲು ಯಾವ ಪದವಾದರೂ ಬಳಸಬಹುದು. ಆದರೆ ತಾನು ಮುಖ್ಯಮಂತ್ರಿಯಾಗಿದ್ದೆ ಎನ್ನುವುದನ್ನು ನೆನಪಿಟ್ಟುಕೊಂಡು ಟೀಕೆ ಮಾಡಿದರೆ ಒಳ್ಳೆಯದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ‘ಈ ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡುದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಈ ಹಿಂದೆ ಮಾಡಿದ್ದ ಸಾಲವನ್ನು ಪ್ರಧಾನಿ ಮೋದಿ ತೀರಿಸಿದ್ದಾರೆ. ಅಲ್ಲದೇ ವಿವಿಧ 15 ದೇಶಗಳಿಗೆ ಮೋದಿಯವರು ಸಾಲ ಕೊಟ್ಟಿದ್ದಾರೆ. ರಾಷ್ಟ್ರವನ್ನು ಮಾರಾಟ ಮಾಡಿದ್ದರೇ ಇದಾಗುತ್ತಿತ್ತಾ ಎಂದರು.

ಒಂದೇ ಒಂದು ವರ್ಷದಲ್ಲಿ ದೇಶವನ್ನು ರಾಮರಾಜ್ಯ ಮಾಡಲು ಸಾಧ್ಯವಾಗಲ್ಲ. ಇರುವ ಆರ್ಥಿಕ ಪರಿಸ್ಥಿತಿ, ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲಾ ತಜ್ಞರು ಕೂಡಾ ಮೋದಿ ಅವರ ಬಜೆಟ್ ಅನ್ನು ಸ್ವಾಗತ ಮಾಡಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಟೀಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ರಾಜ್ಯಕ್ಕೆ ಏನೇನು ಬಂದಿದೆ ಎನ್ನುವ ಬಗ್ಗೆ ಪಟ್ಟಿಯನ್ನೇ ಕೊಡುತ್ತೇನೆ. 400 ವಂದೇ ಮಾತರಂ ರೈಲು ಬರುತ್ತಿವೆ. ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಬರುತ್ತದಾ? 80 ಲಕ್ಷ ಮನೆ ಕರ್ನಾಟಕ ಬಿಟ್ಟು ಬರುತ್ತದಾ? 10 ಸಾವಿರ ಕೋಟಿ ಮೂಲಭೂತ ಸೌಕರ್ಯಕ್ಕೆ ಕೊಡುತ್ತಿದ್ದಾರೆ. ಕರ್ನಾಟಕ ಬಿಟ್ಟು ಬರುತ್ತದಾ? ಎಲ್ಲವನ್ನೂ ಕಾಂಗ್ರೆಸ್ ಟೀಕೆ ಮಾಡಿದರೆ ನಾವು ಏನು ಮಾಡಕಾಗಲ್ಲ. ನರೇಗಾ ಯೋಜನೆ ಇವರ ಸರಕಾರದಲ್ಲಿ ಎಷ್ಟು ಮಾಡಿದರು. ನಮ್ಮ ಸರಕಾರ ಬಂದ ಮೇಲೆ ಯಾಕೆ ಜಾಸ್ತಿಯಾಯಿತು. 13 ಕೋಟಿ ಇದ್ದಂತಹ ನರೇಗಾ ಮಾನವ ದಿನವನ್ನು ಜಾಸ್ತಿ ಕೊಟ್ಟರು, ಇದೆಲ್ಲವೂ ಕೇಂದ್ರ ಸರಕಾರದ ಬಜೆಟ್ ನಲ್ಲಿ ಸಿಕ್ಕಿರುವುದು. ಈ ಬಜೆಟ್ ನಲ್ಲಿ ಯಾವುದೇ ರಾಜಕಾರಣ ಮಾಡಲು ಹೋಗಿಲ್ಲ. ದೇಶಕ್ಕೆ ಒಳ್ಳೆಯದಾಗಲೆಂದು ವಿಶೇಷ ಬಜೆಟ್ ತಂದಿದ್ದಾರೆ. ಕಾಂಗ್ರೆಸ್ ಸ್ವಾಗತ ಮಾಡಬೇಕಿತ್ತು. ಆದರೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ವಿರೋಧ ಮಾಡಿದ್ದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಯವರಿಗೆ ಸಂಪುಟ ವಿಸ್ತರಣೆಯೋ ಅಥವಾ,ಪುನಾರಚನೆಯೋ ಎಂದೇ ಗೊತ್ತಿಲ್ಲದೆ ಹೋಗುತ್ತಿರಬೇಕಾದರೆ ನನಗೆ ಗೊತ್ತಾಗಲು ಸಾಧ್ಯವೇ? ಅಲ್ಲಿಗೆ ಹೋಗಿ ಬಂದ ಮೇಲೆ ಅವರೇ ನಿಮ್ಮ ಬಳಿ ಹೇಳುತ್ತಾರೆ. ನಾನು ಹಿರಿಯ ಸಚಿವ ಹೌದು, ಕೇಂದ್ರದ ನಾಯಕರ ಜೊತೆ ಸಂಪರ್ಕ ಇಟ್ಟುಕೊಂಡಿರುವುದು ಹೌದು. ಆದರೆ ಮುಖ್ಯಮಂತ್ರಿ ಅವರು ಅಲ್ಲಿಗೆ ಹೋದ ಸಂದರ್ಭದಲ್ಲಿ ಪ್ರಧಾನಮಂತ್ರಿ ಏನು ಹೇಳುತ್ತಾರೆಎಂಬುದನ್ನು ರಹಸ್ಯವಾಗಿಟ್ಟಿರುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next