Advertisement

Vijayapura; ರೈತರ ಆತ್ಮಹತ್ಯೆಗೆ ಸಚಿವರಿಂದ ಅಪಮಾನ: ಕೆ.ಎಸ್.ಈಶ್ವರಪ್ಪ ಕಿಡಿ

04:20 PM Sep 07, 2023 | Team Udayavani |

ವಿಜಯಪುರ: ರಾಜ್ಯದಲ್ಲಿ ಮಳೆ ಇಲ್ಲದೇ ಭೀಕರ ಬರ ಆವರಿಸಿದ್ದು, ರಾಜ್ಯದಲ್ಲಿ ಅದಾಗಲೇ 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಸಚಿವರು ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರೈತರ ಆತ್ಮಹತ್ಯೆಯನ್ನು ಅಪಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರು ರೈತರ ಪ್ರಾಮಾಣಿಕತೆಯನ್ನೇ ಅಪಮಾನ ಮಾಡಿದೆ. ಇಂಥ ಹೇಳಿಕೆಗಳ ಮೂಲಕ ರೈತರ ಆತ್ಮಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಮತ್ತೊಂದೆಡೆ ಇಂಥಹ ಮನಸ್ಥಿತಿಯಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಕೊಡುವಲ್ಲಿಯೂ ಅನ್ಯಾಯ ಮಾಡಿದೆ. ಸರ್ಕಾರ ಕೂಡಲೇ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲ ರೈತರ ಕುಟುಂಬಗಳಿಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಹಾಗೂ ಸಚಿವರು ಇನ್ನೂ ಹನಿಮೂನ್ ಮೂಡನಲ್ಲಿದ್ದಾರೆ. ಪರಿಣಾಮ ಮಳೆ ಇಲ್ಲದೇ ಬಹುತೇಕ ಎಲ್ಲೆಡೆ ಭೀಕರ ಬರ ಆವರಿಸಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಂಕಷ್ಟದಲ್ಲಿರುವ ರೈತರ ಬಳಿಗೆ ಹೋಗಿ ನೋವು ಆಲಿಸದ ಜಿಲ್ಲಾ ಉಸ್ತುವಾರಿ ಸಚಿವರ ನಡೆಯಿಂದಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.

ಕೂಡಲೇ ಸರ್ಕಾರ ಬರ ಪೀಡಿತ ತಾಲೂಕಗಳನ್ನು ಘೋಷಿಸುವ ಭರವಸೆ ನೀಡುತ್ತಲೇ ತಿಂಗಳು ಕಳೆದಿದ್ದು, ತಾಲೂಕುಗಳ ಅಂಕಿಅಂಶ ನಿಮ್ಮ ಬಳಿ ಇದೆ ಅಂತ ಗೊತ್ತಿದ್ದು, ಕೂಡಲೇ ಪಟ್ಟಿ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಬರ ಘೋಷಣೆಗೆ ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಗಳು ಅಡ್ಡಿಯಾಗಿವೆ ಎಂದು ಹೇಳುವ ಮುಖ್ಯಮಂತ್ರಿ, ಈ ಬಗ್ಗೆ ಕೇಂದ್ರಕ್ಕೆ ಬರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಅನುಭವಿ ಸಿದ್ಧರಾಮಯ್ಯ, ನಮ್ಮನ್ನು ಕೇಂದ್ರದ ಬಳಿಗೆ ನಿಯೋಗ ಕೊಂಡೊಯ್ದರೆ ಕೇಂದ್ರದಿಂದ ಬರಬೇಕಿರುವ ಸೌಲಭ್ಯ ಕೊಡಿಸಲು ಸಿದ್ಧ ಎಂದರು.

Advertisement

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತೊಂಡಿದ್ದು, ಸರ್ಕಾರ ಅಸ್ತಿತ್ವದಲ್ಲೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಹಂತದಲ್ಲಿ ನಾನು ಯಾಕಾದರೂ ಶಾಸಕನಾದೆ ಎಂದು ಹಳಹಳಿಸುತ್ತಿದ್ದಾರೆ.

ರಸ್ತೆ, ಶಾಲೆ, ಅಂಗನವಾಡಿ ರಿಪೇರಿ ಆಗಿಲ್ಲ, ಬಡವರ ಆಶ್ರಯ ಮನೆ ನಿರ್ಮಾಣ ಹೀಗೆ ಎಲ್ಲ ಅಭಿವೃದ್ಧಿ ಯೋಜನೆಗಳೂ ಸ್ಥಗಿತಗೊಂಡಿವೆ. ಪ್ರತಿ ವರ್ಷ ಶಾಸಕರ ನಿಧಿಗಾಗಿ 2 ಕೋಟಿ ರೂ. ನೀಡಬೇಕಿದ್ದು, 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.

ನಿಮ್ಮ ಗ್ಯಾರೆಂಟಿಗಳು ಸರಿಯಾಗಿ ನಡೆದರೆ ಒಂದೂವರೆ ಕೋಟಿ ಜನರಿಗೆ ಮಾತ್ರ ಕೊಡಲು ಸಾಧ್ಯ. ಹಾಗಾದರೆ ಇನ್ನುಳಿದ ಐದೂವರೆ ಕೋಟಿ ಜನರ ಗತಿ ಏನು ಎಂದು ಪ್ರಶ್ನಿಸಿದ ಮಾಜಿ ಸಚಿವ ಈಶ್ವರಪ್ಪ, ಮನೆ ಮನೆಗೆ ಹೋಗಿ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದೀರಿ. ಅದರ ಮೇಲೆ ಕೆಲವರು ಕೋರ್ಟ್‍ಗೆ ಹೋಗಿದ್ದು, ನ್ಯಾಯಾಲಯ ಈ ಸರ್ಕಾರವನ್ನೇ ವಜಾ ಮಾಡುವ ಸಾಧ್ಯತೆ ಇದೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ ಮಂತ್ರಿ ತರುವುದು ಗೊತ್ತು, ಕಳಿಸುವುದು ಗೊತ್ತು ಎಂದಿದ್ದರು. ಇದೀಗ ಅವರ ಮಾತು ಸತ್ಯವಾಗಿದ್ದು, ಕಾಂಗ್ರೆಸ್ ಸರ್ಕಾರ ಅಸ್ಥಿರವಾಗಿದೆ. ಆಡಳಿತ ಪಕ್ಷದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೆಸ್ಕಾಂ ಅಧಿಕಾರಿ ಫೋನ್ ಕರೆ ಸ್ವೀಕರಿಸಿಲ್ಲ, ನನ್ನ ಕೆಲಸ ಮಾಡಿಲ್ಲ. ಹೀಗಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡುವ ಮಟ್ಟಿಗೆ ಸರ್ಕಾರ ಹದಗೆಟ್ಟಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next