ಶಿವಮೊಗ್ಗ: ಕಾಂಗ್ರೆಸ್ ನವರ ಮೇಲೆ ಆಪಾದನೆ ಬಂದರೆ ವಿಚಾರಣೆಯೇ ಮಾಡಬಾರದು. ಆದರೆ ಬಿಜೆಪಿಯವರ ಪ್ರಕರಣದಲ್ಲಿ ಕ್ಲೀನ್ ಚಿಟ್ ಬಂದರೆ ಕಾನೂನು ಬಾಹಿರ. ಇದು ಕಾಂಗ್ರೆಸ್ ಧೋರಣೆ. ಈ ರೀತಿ ಕುತಂತ್ರ ರಾಜಕಾರಣ ರಾಜ್ಯದಲ್ಲಿ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಮೂರು ಜನ ಸಾಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡಿದರೆ ವಿಪಕ್ಷ ಬದುಕಿದೆ ಎಂದು ಗೊತ್ತಾಗುತ್ತದೆ. ಪ್ರತಿಭಟನೆ ಮಾಡಲಿಲ್ಲವಾದರೆ ವಿಪಕ್ಷ ಸತ್ತು ಹೋಗಿದೆ ಎಂದುಕೊಳ್ಳುತ್ತಾರೆ. ಬೀದಿಗೆ ಇಳಿಯಲಿ, ಹೋರಾಟ ಮಾಡಲಿ ವಿಪಕ್ಷ ಇದೆ ಅಂತಾ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ ವಿಚಾರವಾಗಿ ಟಾಂಗ್ ನೀಡಿದರು.
ಈಶ್ವರಪ್ಪ ಪ್ರಕರಣವನ್ನು ಒಂದೇ ದಿನದಲ್ಲಿ ಮುಚ್ಚಿ ಹಾಕಲಾಗಿತ್ತು ಎಂಬ ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ನನ್ನ ವಿಚಾರವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲಿಗಾದರೂ ತೆಗೆದುಕೊಂಡು ಹೋಗಲಿ. ಅಲ್ಲಿ ಅವರು ಯಶಸ್ವಿಯಾದರೆ ಅವರು ಹೇಳಿದ ಹಾಗೆ ನಾನು ಕೇಳುತ್ತೇನೆ. ಸುಮ್ಮನೆ ಹುಚ್ಚು ಹುಚ್ಚಾಗಿ ಎಲ್ಲಾದಕ್ಕೂ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಇದನ್ನೂ ಓದಿ:ರಸಗೊಬ್ಬರ ಕೊರತೆ: ನಕಲಿ ರಸಗೊಬ್ಬರ ಮಾರಾಟ ತಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಆ ಪ್ರಕರಣದ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಯಾಕಂದ್ರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಡಿಕೆ ಶಿವಕುಮಾರ್ ಅವರ ಹೆಸರು ಬರೆದಿಟ್ಟುಕೊಂಡು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಡಿಕೆಶಿ ಕಾರಣ ಆಗುತ್ತಾರಾ? ಕೆಪಿಸಿಸಿ ಅಧ್ಯಕನಾಗಿ ಈ ರೀತಿ ಮೈ ಮೇಲೆ ಜ್ಞಾನ ಇಲ್ಲದ ಹಾಗೆ ಮಾತನಾಡಬಾರದು ಎಂದು ಈಶ್ವರಪ್ಪ ಹೇಳಿದರು.