ವಿಜಯಪುರ: ಅನರ್ಹ ಶಾಸಕರ ಕೃಪೆಯಿಂದ ನಾವು ಸರ್ಕಾರ ರಚಿಸಿದ್ದೇವೆ, ಅವರ ಋಣ ತೀರಿಸಬೇಕು. ಉಪ ಚುನಾವಣೆಯಲ್ಲಿ 15 ಜನ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನಾವು ಮಂತ್ರಿ ಮಾಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಹರಿಹಾಯ್ದು, ಎಲ್ಲರನ್ನು ಬೈಯ್ಯುವ ಚಾಳಿ ಸಿದ್ದರಾಮಯ್ಯಗಿದೆ. ಮೋದಿ ಅವರನ್ನು ಬೈಯುತ್ತಾರೆ ಬೈದವರಿಗೆ ಜನ ಮತ ಕೊಡಲ್ಲ, ಕೆಲಸ ಮಾಡಿದವರಿಗೆ ಮಾತ್ರ ಮತ ಕೊಡುತ್ತಾರೆ ಎಂದರು.
ಬಿಜೆಪಿ ಪಕ್ಷದಲ್ಲಿ ಸಂಘಟನೆ ಇದೆ. ಸಾಮೂಹಿಕ ನಾಯಕತ್ವದ ಸಂಘಟಿತ ಶಕ್ತಿ ಇದೆ, ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿ 15 ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ ನಲ್ಲಿ ನಾಯಕತ್ವ ಛಿದ್ರವಾಗಿದ್ದು, ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳದೇ ಪ್ರತ್ಯೇಕ ಪ್ರಚಾರ ಮಾಡುತ್ತಿದ್ದಾರೆ. ಒಡೆದ ಮನೆಯಾಗಿರುವ ಕಾಂಗ್ರೆಸ್ ನಲ್ಲಿ ಸಂಘಟನೆಯೇ ಇಲ್ಲ ಎಂದು ಹರಿಹಾಯ್ದರು.
ಉಪ ಚುನಾವಣೆಯ ಬಳಿಕ ಜೆಡಿಎಸ್ ಜೊತೆಗೂಡಿ ಕಾಂಗ್ರೆಸ್ ಸರ್ಕಾರ ರಚಿಸುವ ಕುರಿತು ಇರುವ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಮುಳುಗುತ್ತಿರುವ ಹಡಗುಗಳು. ಒಬ್ಬರಿಗೊಬ್ಬರು ಅಪ್ಪಿಕೊಂಡು ಇಬ್ಬರೂ ಮುಳುಗುತ್ತಾರೆ, ಇದು ಆ ಪಕ್ಷಗಳ ಪರಿಸ್ಥಿತಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಳುಗುವ ಸಂದರ್ಭದಲ್ಲಿ ಬದುಕುವ ಕಾರಣಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರೂ ಬದುಕುವದಿಲ್ಲ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆಯ ವದಂತಿ ಮಾತ್ರ ಎಂದರು