ದಾವಣಗೆರೆ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನವರಲ್ಲಿ ಬೆಂಬಲ ಕೊಡಿ ಎಂದು ಕೇಳಿದ್ದೇವೆ. ಅವರು ಐದು ದಿನದ ಕಾಲಾವಕಾಶ ಕೊಡಿ ಎಂದಿದ್ದಾರೆ. ನಮಗೆ ಬೆಂಬಲ ಕೊಡುವ ನಂಬಿಕೆ ಇದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ದುಡ್ಡಿನ ಲೆಕ್ಕದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪಕ್ಷಕ್ಕೆ ಸಂಬಂಧ ಇಲ್ಲದೆ ಇರುವವರನ್ನು ಆಯ್ಕೆ ಮಾಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿರೋ ಅಪಮಾನ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ದುಡ್ಡು ಇರುವವರನ್ನು ಹುಡುಕಿ ಹುಡುಕಿ ತಂದು ಜನಪ್ರತಿನಿಧಿಗಳನ್ನು ಕೊಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಜನರು ಸರಿಯಾದ ಬುದ್ದಿ ಕಲಿಸಬೇಕು. ಪರಿಷತ್ ಅಂದರೆ ಚಿಂತರಕರ ಚಾವಡಿ ಅಂತ ಕರೆಯಿಸಿಕೊಳ್ಳುತ್ತದೆ. ಆದರೆ ರಾಜಕಾರಣ ಗಂಧ ಗಾಳಿ ಗೊತ್ತಿಲ್ಲದ, ಗ್ರಾಮೀಣ ಪ್ರದೇಶ ಸಮಸ್ಯೆ ಗೊತ್ತಿಲ್ಲದಂತ ಅಭ್ಯರ್ಥಿಗಳನ್ನು ಕಾಂಗ್ರೆಸ್ ನವರು ಆಯ್ಕೆ ಮಾಡಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ:ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ಎಲ್ಲೂ ನಾನು ಹೇಳಿಲ್ಲ : ಹೆಚ್ ಡಿಕೆ
ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ. ಸಿಎಂ ಕೂಡ ಅವರ ಜೊತೆ ಮಾತುಕತೆ ನಡೆಸಿದ್ದಾರು ಆದರೂ ಅವರು ನಾಮಪತ್ರ ವಾಪಸ್ ಪಡೆದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿಯಲ್ಲಿ ಚುನಾವಣೆ: ಮುಂದಿನ ಫೆಬ್ರವರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತ್ ಚುನಾವಣೆ ನಡೆಯುವ ಸಾದ್ಯತೆಗಳಿವೆ. ಈಗಾಗಲೇ ಕ್ಷೇತ್ರ ಪುನರ್ ವಿಂಗಡಣೆ ಸಮಿತಿ ಮಾಡಲಾಗಿದೆ. ಆದಷ್ಟು ಬೇಗ ವರದಿ ನೀಡಲು ವಿನಂತಿಸಲಾಗಿದೆ. ಜನವರಿಯಲ್ಲಿ ವರದಿ ಸಿಗುವ ಸಾಧ್ಯತೆ ಇದೆ. ಬಹುಶ ಫೆಬ್ರವರಿ ಯಲ್ಲಿ ಚುನಾವಣೆ ನಡೆಯಲಿವೆ ಎಂದು ಈಶ್ವರಪ್ಪ ಹೇಳಿದರು.