ಹೈದರಾಬಾದ್: ತಮಿಳುನಾಡಿನ ಮಾಜಿ ಗವರ್ನರ್ ಮತ್ತು ಏಕೀಕೃತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೇಟಿ ರೋಸಯ್ಯ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಡಿಸೆಂಬರ್ 4,ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ಪ್ರಾಯವಾಗಿತ್ತು.
ರೋಸಯ್ಯಅವರು ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದರು. ಕೆ. ವಿಜಯ ಭಾಸ್ಕರ್ ರೆಡ್ಡಿ ಮತ್ತು ವೈ.ಎಸ್ ರಾಜ ಶೇಖರ ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು.
ರಕ್ತದೊತ್ತಡ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಅವರು ಕೊನೆಯುಸಿರು ಎಳೆದಿದ್ದರು.
ರೋಸಯ್ಯ ಅವರು ಹಣಕಾಸು ಸಚಿವರಾಗಿ ವಿಧಾನಸಭೆಯಲ್ಲಿ ಹಲವು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ.
28 ಜೂನ್ 2014 ರಂದು ಗವರ್ನರ್ ಹೆಚ್. ಆರ್. ಭಾರದ್ವಾಜ್ ಅವರ ಅವಧಿ ಮುಗಿದಾಗ ಅವರಿಗೆ ಕರ್ನಾಟಕದ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು.
ರೋಸಯ್ಯ ಅವರ ನಿಧಾನಕ್ಕೆ ಅಪಾರ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.