Advertisement

ಏಕದಿನದಿಂದಲೂ ರಿಷಭ್‌ ಹೊರಕ್ಕೆ? ರಾಹುಲ್‌ರನ್ನೇ ಮುಂದುವರಿಸಲು ಕೊಹ್ಲಿ ಒಲವು

10:16 AM Jan 22, 2020 | Team Udayavani |

ಬೆಂಗಳೂರು: ಸತತವಾಗಿ ಲಯದ ಕೊರತೆಯಿಂದ ಒದ್ದಾಡುತ್ತಿರುವ, ಹಾಗೆಯೇ ವಿಕೆಟ್‌ಕೀಪಿಂಗ್‌ನಲ್ಲೂ ಪದೇಪದೇ ವಿಫ‌ಲವಾಗುತ್ತಿರುವ ರಿಷಭ್‌ ಪಂತ್‌ ಭವಿಷ್ಯ ದಿನೇದಿನೇ ಕಷ್ಟಕರವಾಗಿ ಪರಿಣಮಿಸುತ್ತಿದೆ. ಈಗಾಗಲೇ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅವರು, ಏಕದಿನ ತಂಡಕ್ಕೆ ಮರಳುವುದೂ ಕಷ್ಟ ಎನ್ನುವಂತಹ ವಾತಾವರಣವಿದೆ. ಈ ಸುಳಿವನ್ನು ಭಾನುವಾರ ಆಸ್ಟ್ರೇಲಿಯ ವಿರುದ್ಧ ಮೂರನೇ ಏಕದಿನ ಪಂದ್ಯ ಮುಗಿದ ನಂತರ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದಾರೆ.

Advertisement

ಮೊದಲ ಏಕದಿನ ಪಂದ್ಯದಲ್ಲಿ ರಿಷಭ್‌ ಪಂತ್‌ ಗಾಯಗೊಂಡು ಕ್ಷೇತ್ರರಕ್ಷಣೆಗೆ ಇಳಿದಿರಲಿಲ್ಲ. ಅವರ ಜಾಗದಲ್ಲಿ ಕೆ.ಎಲ್‌. ರಾಹುಲ್‌ ಯಶಸ್ವಿಯಾಗಿಯೇ ವಿಕೆಟ್‌ ಕೀಪಿಂಗ್‌ ನಡೆಸಿದ್ದರು. 3ನೇ ಪಂದ್ಯದ ಹೊತ್ತಿಗೆ ರಿಷಭ್‌ ಸಂಪೂರ್ಣ ಚೇತರಿಸಿಕೊಂಡಿದ್ದರೂ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ರಾಹುಲ್‌ ಅವರೇ ವಿಕೆಟ್‌ ಕೀಪಿಂಗ್‌ ನಡೆಸಿದ್ದಾರೆ. ಈ ನಡೆಯನ್ನು ಕೊಹ್ಲಿ ಬೆಂಬಲಿಸಿದ್ದಾರೆ.

ರಾಹುಲ್‌ರನ್ನು ಕೀಪರ್‌ ಆಗಿಸಿರುವುದರಿಂದ ತಂಡದ ಸಮತೋಲನ ಸಾಧ್ಯವಾಗಿದೆ. ಹೆಚ್ಚುವರಿ ಬ್ಯಾಟ್ಸ್‌ಮನ್‌ ಒಬ್ಬರು ಸಿಕ್ಕಂತಾಗಿದೆ. ಆದ್ದರಿಂದ ಇದನ್ನು ಸದ್ಯಕ್ಕೆ ಬದಲಿಸಲು ಬಯಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಈ ಮಾತು ರಿಷಭ್‌ ಪಂತ್‌ ಅವರ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಕಳೆದ ವಿಶ್ವಕಪ್‌ನಿಂದ ರಿಷಭ್‌ ತಮ್ಮ ಕಳಪೆ ಬ್ಯಾಟಿಂಗ್‌ ಹಾಗೂ ಕಳಪೆ ವಿಕೆಟ್‌ ಕೀಪಿಂಗ್‌ ಕಾರಣಕ್ಕೆ ಟೀಕೆಗೆ ತುತ್ತಾಗಿದ್ದಾರೆ. ಅವರಿಗೆ ಸುಧಾರಿಸಿಕೊಳ್ಳಲು ಬಹಳ ಅವಕಾಶ ನೀಡಲಾಗಿದೆ. ಅಷ್ಟಾದರೂ ಸುಧಾರಿಸಿಕೊಳ್ಳದಿರುವುದರಿಂದ ಅವರ ಜಾಗದಲ್ಲಿ ಇನ್ನೊಬ್ಬರಿಗೆ ಅವಕಾಶ ಕೊಡಲು ತಂಡದಲ್ಲಿ ಚಿಂತನೆ ನಡೆದಿರುವ ಬಗ್ಗೆ ಸುದ್ದಿಯಾಗಿತ್ತು. ಅದೀಗ ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಕೊಹ್ಲಿ ಹೇಳಿದ್ದೇನು?: ತಂಡದಲ್ಲಿ ಯಾವ ಸ್ಥಾನದಲ್ಲಿ ಯಾರು ಆಡಬೇಕೆಂಬ ಅಸ್ಪಷ್ಟತೆ ಇದ್ದಿದ್ದರಿಂದ ಈ ಹಿಂದೆ ಬಹಳ ತೊಂದರೆಯಾಗಿತ್ತು. ಈಗ ಈ ಬದಲಾವಣೆ ನಮಗೆ ಸರಿಯೆನಿಸಿದೆ. ಇದನ್ನೇ ಸ್ವಲ್ಪಕಾಲ ಮುಂದುವರಿಸಲು ಬಯಸಿದ್ದೇವೆ. ಮುಂದೆ ಇದು ಸರಿಯೋ ತಪ್ಪೋ ತೀರ್ಮಾನಿಸುತ್ತೇವೆ. ಗೆಲುವಿನ ತಂಡವನ್ನು ಬದಲಿಸಿ ಗೊಂದಲ ಸೃಷ್ಟಿಸಲು ಬಯಸುವುದಿಲ್ಲ ಎಂದು ಹೇಳಿದರು.

Advertisement

ಇದು ಕಳೆದವರ್ಷದ ವಿಶ್ವಕಪ್‌ ವೇಳೆ, ನಾಲ್ಕನೇ ಕ್ರಮಾಂಕದಲ್ಲಿ ರಿಷಭ್‌ ಎಡವಿದ್ದನ್ನು ಪರೋಕ್ಷವಾಗಿ ಸೂಚಿಸಿದಂತಿತ್ತು. ಕೆ.ಎಲ್‌.ರಾಹುಲ್‌ ಅವರ ಬ್ಯಾಟಿಂಗ್‌ ಸಾಮರ್ಥ್ಯವನ್ನೂ ಕೊಹ್ಲಿ ಹೊಗಳಿದರು. ಈ ವೇಳೆ 2003ರಲ್ಲಿ ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನೀಡಿದ್ದನ್ನು ನೆನಪಿಸಿಕೊಂಡರು. ಆಗ ತಂಡಕ್ಕೆ ಉತ್ತಮ ಸಮನ್ವಯ ಸಾಧ್ಯವಾಗಿತ್ತು. ಈಗಲೂ ಅದು ಸಾಧ್ಯವಾಗಲಿದೆ ಎನ್ನುವುದು ಕೊಹ್ಲಿ ಅಭಿಪ್ರಾಯ. ಕೊಹ್ಲಿ ತಮ್ಮ ಹೇಳಿಕೆಯ ಮೂಲಕ ಎಂ.ಎಸ್‌.ಧೋನಿ ಪುನರಾಗಮನವೂ ಇಲ್ಲ ಎನ್ನುವುದನ್ನು ಸಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next