ಮುಂಬೈ: ಟೀಂ ಇಂಡಿಯಾದ ಸ್ಟೈಲಿಶ್ ಆಟಗಾರ, ಕನ್ನಡಿಗ ಕೆ ಎಲ್ ರಾಹುಲ್ ಸದ್ಯ ಅದ್ಭುತ ಫಾರ್ಮ್ ನಲ್ಲಿರುವ ಆಟಗಾರ. ಆರಂಭಿಕ ಸ್ಥಾನ, ಮಧ್ಯಮ ಕ್ರಮಾಂಕ, ವಿಕೆಟ್ ಕೀಪಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಮಿಂಚು ಹರಿಸುತ್ತಿರುವ ಕೆ ಎಲ್ ರಾಹುಲ್ ಆ ಒಂದು ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಇಂಡಿಯಾ ಟುಡೆ ಜೊತೆ ಮಾತನಾಡಿದ ಕೆ ಎಲ್ ರಾಹುಲ್, ನನ್ನ ಈಗಿನ ಸ್ಥಿರ ಪ್ರದರ್ಶನಕ್ಕೆ ಆ ಒಂದು ಘಟನೆಯೇ ಕಾರಣ. ಆ ಘಟನೆ, ಅಮಾನತು ಎಲ್ಲಾ ಕಳೆದ ನಂತರ ನಾನು ನನಗಾಗಿಯೇ ಆಡಬೇಕೆಂದು ಯೋಚಿಸುತ್ತಿದ್ದೆ, ಆದರೆ ನಾನು ವಿಫಲನಾದೆ. ನಂತರ ತಂಡಕ್ಕೆ ಏನು ಅಗತ್ಯವಿದೆಯೋ ಹಾಗೆ ಆಡಬೇಕು ಎಂದು ನಿರ್ಧರಿಸಿದೆ. ಅದರಿಂದ ಯಶಸ್ಸು ಸಾಧಿಸಿಲು ಸಾಧ್ಯವಾಗಿದೆ ಎಂದರು.
2019ರ ವರ್ಷಾರಂಭದಲ್ಲಿ ಕೆ ಎಲ್ ಮತ್ತು ಹಾರ್ದಿಕ್ ಪಾಂಡ್ಯ ಒಂದು ಖಾಸಗಿ ಕಾರ್ಯಕ್ರಮದ ಅಸಭ್ಯ ಸಂಭಾಷಣೆಯಿಂದ ವಿವಾದಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದ ಇವರಿಬ್ಬರಿಗೂ ಬಿಸಿಸಿಐ ಎರಡು ವಾರಗಳ ಅಮಾನತು ಶಿಕ್ಷೆಗೆ ಒಳಗಾಗಿದ್ದರು.
ಕೆ ಎಲ್ ರಾಹುಲ್ ಉತ್ತಮ ಪ್ರತಿಭೆಯಿದ್ದರೂ ಮೊದಲು ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿದ್ದರು. ಆದರೆ 2019ರ ನಂತರ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಓರ್ವರಾಗಿದ್ದಾರೆ.
2019ರಲ್ಲಿ 13 ಏಕದಿನ ಪಂದ್ಯಗಳಿಂದ 572 ರನ್ ಮತ್ತು 9 ಟಿ20 ಪಂದ್ಯಗಳಿಂದ 356 ರನ್ ಗಳಿಸಿದ್ದಾರೆ. 2020ರ ಮೊದಲು ಮೂರು ತಿಂಗಳಲ್ಲಿ ಆಡಿರುವ ಆರು ಏಕದಿನ ಪಂದ್ಯಗಳಿಂದ 350 ರನ್ ಗಳಿಸಿದ್ದು, ಆರು ಟಿ20 ಪಂದ್ಯಗಳಿಂದ 323 ರನ್ ಗಳಿಸಿದ್ದರು.
ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗೊಯೂ ಕೆ ಎಲ್ ರಾಹುಲ್ ಆಯ್ಕೆಯಾಗಿದ್ದರು. ಆದರೆ ಕೋವಿಡ್-19 ಕಾರಣದಿಂದ ಐಪಿಎಲ್ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ.