ದುಬಾಯಿ: ಕನ್ನಡಿಗರ ಪಾರಮ್ಯದ ತಂಡ ಮತ್ತು ಕರ್ನಾಟಕದ ತಂಡ ಇವೆರಡರ ನಡುವಿನ ಐಪಿಎಲ್ ಲೀಗ್ ಜಿದ್ದಾಜಿದ್ದಿನಲ್ಲಿ RCB ಗೆಲುವಿಗೆ 207 ರನ್ ಗಳ ಗುರಿ ನಿಗದಿಯಾಗಿದೆ.
ಅರಬ್ ನಾಡಿನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್ ಪಂದ್ಯಾಟದ ಇಂದಿನ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿವೆ.
ಟಾಸ್ ಗೆದ್ದ RCB ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಕೊಹ್ಲಿ ನಿರ್ಧಾರ ಅರ್ಧಯಶಸ್ಸನ್ನು ಕಂಡಿತು. RCB ಬೌಲರ್ ಗಳು ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೂ ಆ ಓರ್ವ ಬ್ಯಾಟ್ಸ್ ಮನ್ ಮಾತ್ರ RCB ಪಾಲಿಗೆ ಚಾಲೆಂಜ್ ಆಗಿಯೇ ಉಳಿದುಬಿಟ್ಟ.
ಆತನೇ ಕನ್ನಡಿಗ ಕೆ.ಎಲ್. ರಾಹುಲ್!, ಹೌದು ಕಿಂಗ್ಸ್ ಇಲೆವನ್ ಕಪ್ತಾನ ಮತ್ತು ವಿಕೆಟ್ ಕೀಪರ್ ಕನ್ನಡದ ಕುವರ ಕೆ.ಎಲ್ ರಾಹುಲ್ (ನಾಟೌಟ್ 132) ಆರಂಭಿಕನಾಗಿ ಆಗಮಿಸಿ ಈ ಐಪಿಎಲ್ ಕೂಟದ ಪ್ರಥಮ ಶತಕ ಬಾರಿಸಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಾ RCB ಬೌಲರ್ ಗಳ ಮೇಲೆ ತನ್ನ ಪರಾಕ್ರಮವನ್ನು ಮೆರೆದು ಅಜೇಯರಾಗುಳಿದರು.
Related Articles
ಅವರಿಗೆ ಉಳಿದ ಬ್ಯಾಟ್ಸ್ ಮನ್ ಗಳಿಂದ ಸೂಕ್ತ ಬೆಂಬಲ ದೊರಕದೇ ಹೋದರೂ ರಾಹುಲ್ ಮಾತ್ರ RCB ಬೌಲರ್ ಗಳನ್ನು ಮನಬಂದಂತೆ ದಂಡಿಸುತ್ತಲೇ ಸಾಗಿದರು.
ಇದನ್ನೂ ಓದಿ: ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!
ಪೂರ್ತಿ 20 ಓವರ್ ಗಳವರೆಗೆ ಮೈದಾನದಲ್ಲಿದ್ದ ರಾಹುಲ್ ಎದುರಿಸಿದ್ದು 69 ಎಸೆತಗಳನ್ನು ಬಾರಿಸಿದ್ದು 132 ರನ್. ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 07 ಭರ್ಜರಿ ಸಿಕ್ಸರ್ ಮತ್ತು 14 ಬೌಂಡರಿಗಳಿದ್ದವು. ಮತ್ತು ತಂಡದ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ರಾಹುಲ್ ಒಬ್ಬರೇ ಬಾರಿಸಿದ್ದು ಈ ಕನ್ನಡಿಗನ ಇಂದಿನ ಬ್ಯಾಟಿಗ್ ಪರಾಕ್ರಮಕ್ಕೆ ಸಾಕ್ಷಿ!
ಅಂತಿಮವಾಗಿ 20 ಓವರ್ ಗಳಲ್ಲಿ ಪಂಜಾಬ್ ತಂಡವು 3 ವಿಕೆಟ್ ಗಳ ನಷ್ಟದಲ್ಲಿ 206 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಮೂಲಕ ಕೊಹ್ಲಿ ನೇತೃತ್ವದ ಬೆಂಗಳೂರು ತಂಡದ ಗೆಲುವಿಗೆ ಬೃಹತ್ ಮೊತ್ತದ ‘ಚಾಲೆಂಜ್’ ನೀಡಿದೆ.
ಕೊನೆಯ ಎರಡು ಓವರ್ ಗಳಲ್ಲಿ ಪಂಜಾಬ್ 49 ರನ್ ಕಲೆಹಾಕಿದ್ದು ರಾಹುಲ್ ಬ್ಯಾಟಿಂಗ್ ವೈಭವದ ಝಲಕ್ ಆಗಿತ್ತು. ಆ ಎರಡು ಓವರ್ ಗಳಲ್ಲಿ ರಾಹುಲ್ 5 ಸಿಕ್ಸರ್ ಗಳನ್ನು ಸಿಡಿಸಿದ್ದರು!
ಪಂಜಾಬ್ ಪರ ರಾಹುಲ್ ಅವರೊಬ್ಬರದ್ದೇ 132 ರನ್ ಗಳಿಕೆಯಾದರೆ, ಮಯಾಂಕ್ ಅಗರ್ವಾಲ್ 26 ರನ್ ಗಳಿಸಿದರು. ಇನ್ನುಳಿದಂತೆ ಪೂರಣ್ 17 ಮತ್ತು ಕೊನೆಯಲ್ಲಿ ಕರುಣ್ ನಾಯರ್ ಔಟಾಗದೇ 8 ಎಸೆತಗಳಲ್ಲಿ 15 ರನ್ ಬಾರಿಸಿ ಮಿಂಚಿದರು.
RCB ಬೌಲರ್ಸ್ ಗಳ ಪೈಕಿ ಶಿವಂ ದುಬೆ 2 ವಿಕೆಟ್ ಪಡೆದರು. ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರತುಪಡಿಸಿ ಉಳಿದವರೆಲ್ಲಾ ದುಬಾರಿಯೆಣಿಸಿದರು.