ಬೆಂಗಳೂರು: ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಇದೀಗ ಭಾರತದ ಟೆಸ್ಟ್ ತಂಡಕ್ಕೆ ಮರಳುವ ಹಾದಿಯಲ್ಲಿದ್ದಾರೆ.
ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾನುವಾರ ಏಕದಿನ ಹಾಗೂ ಟೆಸ್ಟ್ ತಂಡಗಳ ಆಯ್ಕೆ ನಡೆಯಲಿದ್ದು, ರಾಹುಲ್ ಪುನರಾಗಮನ ಬಹುತೇಕ ಖಚಿತ ಎನ್ನಲಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ ಮಾಯಾಂಕ್ ಆಗರ್ವಾಲ್ ಭಾರತದ ನೂತನ ಆರಂಭಿಕ ಜೋಡಿಯಾಗಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕೆ ತೃತೀಯ ಓಪನರ್‌ನ ಅಗತ್ಯ ಇದೆ. ಇದಕ್ಕಾಗಿ ಪೃಥ್ವಿ ಶಾ, ಶುಭಮನ್ ಗಿಲ್ ರೇಸ್‌ನಲ್ಲಿದ್ದಾರೆ. ಆದರೆ, ಸದ್ಯ ರಾಹುಲ್ ಅವರನ್ನು ಯಾವುದೇ ಮಾದರಿಯ ತಂಡದಿಂದ ಕೈಬಿಡುವುದು ಕಷ್ಟ ಎಂಬ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ಕನ್ನಡಿಗನ ಪಾಲಿಗೆ ಭರವಸೆಯಾಗಿದೆ.
ಕಳೆದ ಸೆಪ್ಟಂಬರ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕಿಂಗ್‌ಸ್ಟನ್‌ನಲ್ಲಿ ರಾಹುಲ್ ಕೊನೆಯ ಟೆಸ್ಟ್ ಆಡಿದ್ದರು. ಒಟ್ಟು 36 ಟೆಸ್ಟ್‌ಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.
ಪಾಂಡ್ಯ ಫಿಟ್‌ನೆಸ್ ಹೇಗಿದೆ?
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಟೀಮ್ ಇಂಡಿಯಾಕ್ಕೆ ವಾಪಸಾಗುವ ಹಾದಿಯಲ್ಲಿದ್ದಾರೆ. ಆದರೆ ಅವರ ಫಿಟ್‌ನೆಸ್ ಹೇಗಿದೆ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಖಾಸಗಿ ಟ್ರೇನರ್ ರಜನೀಕಾಂತ್ ಪ್ರಕಾರ, ಬೌಲಿಂಗ್ ವರ್ಕ್‌ಲೋಡ್ ಟೆಸ್ಟ್’ನಲ್ಲಿ ಪಾಂಡ್ಯ ತೇರ್ಗಡೆಯಾಗಿಲ್ಲ. ಹೀಗಾಗಿ ಅವರನ್ನು ನ್ಯೂಜಿಲೆಂಡ್ ಪ್ರವಾಸದ ಭಾರತ ಎ’ ತಂಡದಿಂದ ಹಿಂದೆ ಸರಿಯುವಂತೆ ಸೂಚಿಸಲಾಗಿತ್ತು. ಇದು ವಾರದ ಹಿಂದಿನ ವಿದ್ಯಮಾನ. ಈಗ ಪೂರ್ಣ ಪ್ರಮಾಣದ ದೈಹಿಕ ಕ್ಷಮತೆ ಹೊಂದಿದ್ದೇ ಆದಲ್ಲಿ ಪಾಂಡ್ಯ ಆಯ್ಕೆ ಬಗ್ಗೆ ಅನುಮಾನವಿಲ್ಲ.