ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವಿಂದು ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ಆರಂಭವಾಗಿದೆ. ನಾಯಕ ವಿರಾಟ್ ಕೊಹ್ಲಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಗೆ ನಾಯಕತ್ವ ವಹಿಸಲಾಗಿದೆ.
ರೋಹಿತ್ ಶರ್ಮಾ ಗಾಯಗೊಂಡ ಕಾರಣ ರಾಹುಲ್ ಟೆಸ್ಟ್ ಉಪನಾಯಕನಾಗಿ ಆಯ್ಕೆಯಾಗಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೂ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ ಇದಕ್ಕೂ ಮೊದಲೇ ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶ ಕೆ.ಎಲ್ ರಾಹುಲ್ ಪಾಲಿಗೆ ಒದಗಿದೆ.
ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ರಾಹುಲ್ ಕಳೆದ ಇಂಗ್ಲೆಂಡ್ ಸರಣಿಗೂ ಮೊದಲು ಶುಭ್ಮನ್ ಗಿಲ್ ಗಾಯಗೊಂಡ ಕಾರಣ ತಂಡಕ್ಕೆ ಆಯ್ಕೆಯಾಗಿದ್ದರು. ಲಾರ್ಡ್ಸ್ ನಲ್ಲಿ ಶತಕ ಗಳಿಸಿದ್ದ ರಾಹುಲ್ ತಂಡದಲ್ಲಿ ಖಾಯಂ ಸ್ಥಾನ ಪಡೆದರು. ಇದೀಗ ತಂಡದ ನಾಯಕನ ಸ್ಥಾನಕ್ಕೇರಿದ್ದಾರೆ ರಾಹುಲ್.
ಇದನ್ನೂ ಓದಿ:ಇಂದಿನಿಂದ ಜೋಹಾನ್ಸ್ ಬರ್ಗ್ ಟೆಸ್ಟ್: ವಿರಾಟ್ ಪಂದ್ಯದಿಂದ ಔಟ್, ರಾಹುಲ್ ನೂತನ ನಾಯಕ
1990 ರಲ್ಲಿ ಮೊಹಮ್ಮದ್ ಅಜರುದ್ದೀನ್ ನಂತರ ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗದೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕ ಎಂಬ ಗರಿಮೆಗೆ ಕೆಎಲ್ ರಾಹುಲ್ ಪಾತ್ರರಾದರು.
ಕರ್ನಾಟಕದ ನಾಲ್ಕನೇ ಆಟಗಾರ: ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕರ್ನಾಟಕದ ನಾಲ್ಕನೇ ಆಟಗಾರ ಎಂಬ ಸಾಧನೆಯನ್ನು ಕೆ.ಎಲ್ ರಾಹುಲ್ ಈ ಸಂದರ್ಭದಲ್ಲಿ ಮಾಡಿದರು. ಈ ಹಿಂದೆ ಗುಂಡಪ್ಪ ವಿಶ್ವನಾಥ್ ಎರಡು ಟೆಸ್ಟ್, ರಾಹುಲ್ ದ್ರಾವಿಡ್ 25 ಟೆಸ್ಟ್ ಮತ್ತು ಅನಿಲ್ ಕುಂಬ್ಳೆ 14 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.