ಬೆಳಗಾವಿ: ಖ್ಯಾತ ಚಿತ್ರ ಸಾಹಿತಿ ಕೆ. ಕಲ್ಯಾಣ್ ಸಂಸಾರದಲ್ಲಿ ಮನಸ್ತಾಪ ಬರುವಂತೆ ಮಾಡಿ ಲಕ್ಷಾಂತರ ರೂ. ಲಪಟಾಯಿಸಿದ್ದ ಮಂತ್ರವಾದಿ ಶಿವಾನಂದ ವಾಲಿ ಪೊಲೀಸರ ಬಲೆಗೆ ಬಿದ್ದಿದ್ದು. ಆರೋಪಿಯಿಂದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ
ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಿಸಿಪಿ ವಿಕ್ರಮ್ ಆಮಟೆ. ಅವರು ಕೆ. ಕಲ್ಯಾಣ್ ಕುಟುಂಬದ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಚೀಟಿಂಗ್ ಹಾಗೂ ಅಪಹರಣ ಕೇಸ್ ದಾಖಲಾಗಿತ್ತು ಈ ಪ್ರಕರಣ ಬೆನ್ನು ಬಿದ್ದ ಪೊಲೀಸರಿಗೆ ಶಿವಾನಂದ ವಾಲಿ ಮಾಡಿದ್ದ ಕುತಂತ್ರದ ಬಗ್ಗೆ ಸಾಕಷ್ಟು ಮಾಹಿತಿ ಲಭಿಸಿದೆ ಎಂದರು.
ಶಿವಾನಂದ ವಾಲಿ ಎಂಬ ಮಂತ್ರವಾದಿಯನ್ನು ವಿಚಾರಣೆ ಮಾಡಿದಾಗ ಕೆ. ಕಲ್ಯಾಣ್ ಪತ್ನಿಗೆ ಕಂಟಕ ಇದೆ ಸರಿಪಡಿಸುವೆ ಎಂದು ಮನೆ ಕೆಲಸದವಳಾದ ಗಂಗಾ ಕುಲಕರ್ಣಿ ಬಳಸಿಕೊಂಡು ಹಣ ಲಪಟಾಯಿಸಿದ್ದಾನೆ. ಆರೋಪಿಯು ಇಲ್ಲಿಯವರೆಗೆ 350 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ, ಹುಬ್ಬಳ್ಳಿ, ದಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಐದರಿಂದ ಆರು ಕೋಟಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ:ಸೈಬರ್ ಕ್ರೈಂ ರಾಜಧಾನಿಯತ್ತ ಬೆಂಗಳೂರು
ಆರು ದಿನಗಳ ಕಾಲ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಯಿತು. ಆರೋಪಿಯಿಂದ 9 ಮ್ಯಾಕ್ಸಿ ಕ್ಯಾಬ್, 350 ಗ್ರಾಮ ಚಿನ್ನ, 6 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿಯಲ್ಲಿನ 6 ಆಸ್ತಿಗಳಲ್ಲಿ ಎರಡನ್ನು ಶಿವಾನಂದ ವಾಲಿ ತನ್ನ ಹೆಸರಿಗೆ ವರ್ಗಾಯಿಸಿ ಕೊಂಡಿದ್ದಾನೆ. ಉಳಿದ ನಾಲ್ಕು ಪ್ರಾಪರ್ಟಿಗಳ ಜಿಪಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ. ಅಂದಾಜು 6 ಕೋಟಿ ಮೌಲ್ಯದ ಆಸ್ತಿ ಬರೆಸಿಕೊಂಡಿದ್ದಾನೆ ಎಂದು ಡಿಸಿಪಿ ಅಮಟೆ ತಿಳಿಸಿದರು.
ಕೆ.ಕಲ್ಯಾಣ ಪತ್ನಿ, ಅತ್ತೆ ಮಾವ ಅವರಿಗೆ ಜೀವಕ್ಕೆ ಆಪತ್ತಿದೆ ಎಂದು ಹೆದರಿಸಿ ಹಣ, ಆಸ್ತಿ ಬರೆಸಿಕೊಂಡಿದ್ದಾನೆ. ಆರೋಪಿಯ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧಕ ಅಧಿನಿಯಮ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಪ್ರಮುಖ ಆರೋಪಿಗಳು. ಗಂಗಾ ಕುಲಕರ್ಣಿ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದರು.
ಸಾರ್ವಜನಿಕರು ಇಂಥ ಮಾಟ ಮಂತ್ರ ನಡೆಸುತ್ತಿರುವವರ ಬಗ್ಗೆ ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ್ ಉಪಸ್ಥಿತರಿದ್ದರು.