Advertisement

ಪ್ರಾಣಿ-ಪಕ್ಷಿಗಳ ಚಿತ್ತಾರಕ್ಕೆ ಮನಸೋತ ಪ್ರವಾಸಿಗರು

01:38 PM Nov 08, 2021 | Team Udayavani |

ಯಳಂದೂರು: ಬಿಆರ್‌ಟಿ ಅರಣ್ಯ ಕೆ.ಗುಡಿ ವಲಯ ವ್ಯಾಪ್ತಿಯ ಅರಣ್ಯ ಇಲಾಖೆ ಕಟ್ಟಡಗಳ ಗೋಡೆಗಳಲ್ಲಿ ಬಿಡಿಸಿರುವ ವನ್ಯಪ್ರಾಣಿ ಪಕ್ಷಿಗಳ ಚಿತ್ರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.!

Advertisement

ಕೆ.ಗುಡಿಗೆ ಆಗಮಿಸುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಸರಿಯಾದ ನಾಮಫ‌ಲಕ ಹಾಕಿಸದೆ ಮಾಹಿತಿ ತಿಳಿಯುತ್ತಿರಲಿಲ್ಲ. ಸಫಾರಿ ಕೇಂದ್ರ, ಮಾಹಿತಿ ಕೇಂದ್ರ, ಅತಿಥಿ ಗೃಹ, ಕಚೇರಿ ಕಟ್ಟಡಗಳು ಒಂದೇ ಬಣ್ಣದಿಂದ ಇರುತ್ತಿದ್ದರಿಂದ ಪ್ರವಾಸಿಗರ ಗೊಂದಲಕ್ಕೆ ಕಾರಣವಾಗಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ, ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡಲು ಗೋಡೆಗಳಲ್ಲಿ ಕಾಡುಪ್ರಾಣಿ ಪಕ್ಷಿಗಳ ಚಿತ್ತಾರ ಮೂಡಿಸಿದೆ. ಅಲ್ಲದೆ ನಾಮಫ‌ಲಕ ಹಾಕಿದ್ದು ಈಗ ಮಾಹಿತಿ ಸುಲಭವಾಗಿ ಸಿಗಲಿದ್ದು, ಗೋಡೆಗಳ ಚಿತ್ತಾರವೂ ಈಗ ಪ್ರವಾಸಿ ತಾಣದ ಕೇಂದ್ರಬಿಂದುವಾಗಿದೆ.

 ಸಫಾರಿ: ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹುಲಿ ಯೋಜನಾ ವನ್ಯಧಾಮ ಹಲವಾರು ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಒಳಗೊಂಡಿರುವ ರಾಜ್ಯದ ಪ್ರಮುಖ ಅರಣ್ಯಧಾಮಗಳಲ್ಲೊಂದಾಗಿದೆ. ಯಳಂದೂರು, ಕೆ.ಗುಡಿ, ಪುಣಜನೂರು, ಕೊಳ್ಳೇಗಾಲ, ಬೈಲೂರು ಸೇರಿ 5 ವನ್ಯಜೀವಿ ವಲಯ ಹಾಗೂ ಚಾಮರಾಜನಗರ ಪ್ರಾದೇಶಿಕ ವಲಯದಿಂದ ಕೂಡಿದೆ. ಇದರಲ್ಲಿನ ಕೆ.ಗುಡಿ ವಲಯದಲ್ಲಿ ಮಾತ್ರ ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಒದಗಿಸುವ ಏಕೈಕ ಪ್ರದೇಶವಾಗಿದೆ.

ಗಮನ ಸೆಳೆಯುವ ಪ್ರಾಣಿಗಳ ಚಿತ್ರ: ಹುಲಿ, ಆನೆ, ಜಿಂಕೆ, ಕಾಡೆಮ್ಮೆ, ಚಿರತೆ, ಸೀಳುನಾಯಿ ಸೇರಿ ಪಕ್ಷಿಗಳ ಚಿತ್ರಗಳನ್ನು ಇಲಾಖೆಯ ಸಫಾರಿ ಕೇಂದ್ರ, ಅತಿಥಿ ಗೃಹ, ಚೆಕ್‌ ಪೋಸ್ಟ್‌, ದಾರಿ ಮಧ್ಯದ ನಾಮಫ‌ಲಕಗಳಲ್ಲಿ ಚಿತ್ರದುರ್ಗ ಅರಣ್ಯ ಚಿತ್ರ ಕಲಾವಿದ ನಾಗರಾಜು ಅತ್ಯಾಕರ್ಷಕವಾಗಿ ಚಿತ್ರಗಳನ್ನು ಮೂಡಿಸಿದ್ದಾರೆ. ದಿನನಿತ್ಯ ಹಾಗೂ ವಾರದ ರಜೆ ದಿನಗಲ್ಲಿ ನೂರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿರುವ ಕಾನನ ಮಧ್ಯದಲ್ಲಿ ಚಿತ್ರ ಬಿಡಿಸಲಾಗಿದೆ.  ಹೀಗಾಗಿ ಇದು ಮುಂದಿನ ದಿನಗಳಲ್ಲಿ ಪ್ರವಾಸಿಗರ ಸೆಲ್ಫಿ ಸ್ಪಾಟ್‌ ಆಗುವ ಎಲ್ಲಾ ಸಾಧ್ಯತೆಯಿದೆ ಎಂಬುದು ಸ್ಥಳೀಯರ ಮಾತು.

ಅರಣ್ಯದಲ್ಲಿ ವಾಹನ ನಿಲ್ಲಿಸಿದರೆ 1 ಸಾವಿರ ರೂ. ದಂಡ: ಬಿಆರ್‌ಟಿ ಅರಣ್ಯ ಇಲಾಖೆಯ ಕಾನನದಲ್ಲಿ ಗುಂಬಳ್ಳಿ ಚೆಕ್‌ ಪೋಸ್ಟ್‌ ನಿಂದ ಬಿಳಿಗಿರಿರಂಗನಬೆಟ್ಟ ಹಾಗೂ ಕೆ.ಗುಡಿಯಿಂದ ಹೊಂಡರಬಾಳು ಚೆಕ್‌ ಪೋಸ್ಟ್‌ನಿಂದ ಹಾದು ಹೋಗಿರುವ ರಸ್ತೆಯ 30 ಕಿ.ಮೀಗೂ ಹೆಚ್ಚಿನ ದೂರದ ಮಾರ್ಗದಲ್ಲಿ ಪ್ರವಾಸಿಗರು ವಾಹನ ನಿಲ್ಲಿಸುವುದು, ವನ್ಯಪ್ರಾಣಿ, ಪಕ್ಷಿಗಳ ಚಿತ್ರ ತೆಗೆಯುವುದು, ಪ್ಲಾಸ್ಟಿಕ್‌ ಬಳಕೆ ಸೇರಿದಂತೆ ಇತರೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ 1 ಸಾವಿರ ರೂ. ಗಳ ದಂಡವನ್ನು ವಿಧಿಸುವ ಬಗ್ಗೆ ಅರಣ್ಯ ಇಲಾಖೆ ಎಚ್ಚರಿಕೆ ಫ‌ಲಕಗಳನ್ನು ಹಾಕಿದೆ. ಮಾರ್ಗ ಮಧ್ಯೆ 10ಕ್ಕೂ ಹೆಚ್ಚು ಕಡೆ ಈ ಬಗ್ಗೆ ಗೋಡೆ ನಿರ್ಮಿಸಿ ಅರಿವು ಮೂಡಿಸಲಾಗಿದೆ.

Advertisement

ಕೆ.ಗುಡಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಗೋಡೆಗಳಿಗೆ ಕೇವಲ ಬಣ್ಣ ಮಾತ್ರ ಬಳಿಯಲಾಗಿತ್ತು. ಈಗ, ಪ್ರವಾಸಿಗರನ್ನು ಆಕರ್ಷಿಸಲು ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಲಾಗಿದೆ. ಇದು ಈ ಕಾನನದಲ್ಲಿರುವ ಪ್ರಾಣಿ ಪಕ್ಷಿಗಳ ಚಿತ್ರವೇ ಆಗಿದ್ದು ಪ್ರಾಣಿ, ಪಕ್ಷಿ, ಗಿಡ, ಮರ ಸಂರಕ್ಷಣೆ ಮಹತ್ವ ಸಾರುವ ಉದ್ದೇಶ ಹೊಂದಲಾಗಿದೆ. ಶಾಂತಪ್ಪ ಪೂಜಾರ್‌, ಬಿಆರ್‌ಟಿ, ಕೆ.ಗುಡಿ ವಲಯದ ಆರ್‌ಎಫ್ಒ

ಬಿಆರ್‌ಟಿ ಅರಣ್ಯ ಇಲಾಖೆ ಕೆ.ಗುಡಿ ವಲಯದ ಅರಣ್ಯ ಇಲಾಖೆ ಮಾಹಿತಿ ಕೇಂದ್ರ, ಸಫಾರಿ ಕೇಂದ್ರ, ಅತಿಥಿ ಗೃಹಗಳ ಗೋಡೆಗಳಲ್ಲಿನ ವನ್ಯಪ್ರಾಣಿ ಪಕ್ಷಿಗಳ ಚಿತ್ರಗಳು ಆಕರ್ಷಣೀಯವಾಗಿವೆ. ವನ್ಯಪ್ರಾಣಿ ಪಕ್ಷಿಗಳ ಬಗ್ಗೆ ಅರಿವು ಮುಡಿಸುವ ಜತೆಗೆ ಅರಣ್ಯ ಸಂಪತ್ತು ಎಷ್ಟು ಮುಖ್ಯ ಎಂಬುದನ್ನು ಚಿತ್ರಗಳೇ ತೋರಿಸುತ್ತಿವೆ ಸುಭಾಷ್‌, ಪ್ರವಾಸಿಗ

 

ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next