ಕೋಲಾರ: ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಕಾಲಿಟ್ಟು ಎರಡು ವರ್ಷ ಎಂಟು ತಿಂಗಳು ಕಳೆದರೂ ಕೇವಲ ಎಂಬತ್ತು ಕೆರೆಗಳನ್ನಷ್ಟೇ ತುಂಬಿಸಲು ಸಾಧ್ಯವಾಗಿದ್ದು, ಯೋಜನೆ ಗುರಿ ತಲುಪಿ ಫಲಪ್ರದವಾಗುವ ಅನುಮಾನ ವ್ಯಕ್ತವಾಗುತ್ತಿದೆ.
ಕನಸಿನ ಮಾತು: ಕೋಲಾರ ಜಿಲ್ಲೆಯ 125 ಮತ್ತು ಚಿಂತಾಮಣಿ ಭಾಗದ 5 ಕೆರೆಗಳು ಸೇರಿದಂತೆ 130 ಕೆರೆಗಳನ್ನು ತುಂಬಿಸುವ ಗುರಿ ಹೊಂದಿದ್ದ ಕೆ.ಸಿ. ವ್ಯಾಲಿ ಯೋಜನೆಯಡಿ ಈಗ ಕೇವಲ 82 ಕೆರೆಗಳು ಮತ್ತು 113 ಚೆಕ್ ಡ್ಯಾಂಗಳನ್ನು ಮಾತ್ರವೇ ತುಂಬಿಸಲು ಸಾಧ್ಯವಾಗಿದೆ. ಇದರ ಆಚೆಗೆ ನೀರು ಹರಿಯುವಿಕೆ ಕಣ್ಣಿಗೆ ಕಾಣದಂತಾಗಿರುವುದರಿಂದ 130 ಕೆರೆ ತುಂಬುವುದು ಕನಸಿನ ಮಾತೇ ಎಂಬಂತಾಗಿದೆ.
ಕೆ.ಸಿ.ವ್ಯಾಲಿ ಹಿನ್ನೆಲೆ: 2013ರ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ಪ್ರಣಾಳಿಕೆಯಲ್ಲಿ ನೀಡಿದ್ದವು. ಅದರಂತೆ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಒಳಚರಂಡಿ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ 130 ಕೆರೆಗಳಿಗೆ ಹರಿಸಲು ಕೆ.ಸಿ.ವ್ಯಾಲಿ ಯೋಜನೆಗೆ 2016 ಮೇ.30 ರಂದು ಭೂಮಿಪೂಜೆ ನೆರವೇರಿಸಿದ್ದರು. 1,342 ಕೋಟಿ ರೂ.ಬಿಡುಗಡೆ ಮಾಡಿದ್ದರು. ತಾವು ಅಧಿಕಾರದಲ್ಲಿರುವಾಗಲೇ ಯೋಜನೆ ಪೂರ್ಣಗೊಳಿಸಿ 130 ಕೆರೆಗಳನ್ನು ತುಂಬಿಸುವ ಭರವಸೆ ನೀಡಿದ್ದರು. ಅದರಂತೆ 2018 ಜೂ.2 ರಂದು ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೆ.ಸಿ.ವ್ಯಾಲಿ ನೀರು ಮೊದಲಿಗೆ ಹರಿದು ಬಂದಿತ್ತು. ಆಗ ಅಧಿಕಾರಿಗಳು ಇನ್ನೆರೆಡು ವರ್ಷದೊಳಗೆ ಜಿಲ್ಲೆಯ 130 ಕೆರೆ ತುಂಬಿ ತುಳುಕಾಡುತ್ತದೆ ಎಂದಿದ್ದರು.
ನೀರು ಹರಿವಿಗೆ ಅಡೆತಡೆ: ಕೆ.ಸಿ.ವ್ಯಾಲಿ ನೀರು ಕೋಲಾರ ಜಿಲ್ಲೆಗೆ ಹರಿಸುವ ವಿಚಾರದಲ್ಲಿ ರೈತ ಸಂಘಟನೆಗಳು ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದವು. ನೀರಿನ ಶುದ್ಧತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆರೇಳು ತಿಂಗಳ ಅಡೆ ತಡೆ ನಂತರ ಕೆ.ಸಿ ವ್ಯಾಲಿ ನೀರು ಕೋಲಾರ ಜಿಲ್ಲೆಗೆ ಹರಿಯಲು ಆರಂಭವಾಗಿತ್ತು. ಆದರೂ, ಇಂದಿಗೂ ಕೆ.ಸಿ.ವ್ಯಾಲಿ ಯೋಜನೆಯಡಿ ಮೂರು ಬಾರಿ ಸಂಸ್ಕರಿಸಿದ ನೀರನ್ನು ಜಿಲ್ಲೆಗೆ ಹರಿಸಬೇಕೆಂಬ ಕೂಗು ಕೇಳಿ ಬರುತ್ತಲೇ ಇದೆ. ಸರ್ಕಾರ ಇದಕ್ಕೆ ಜಾಣ ಕಿವುಡು, ಕುರುಡಾಗಿ ವರ್ತಿಸುತ್ತಿದೆ.
ವಿರೋಧ-ಸ್ವಾಗತ: ಕೆ.ಸಿ.ವ್ಯಾಲಿಯನ್ನು ಮೊದಲು ವಿರೋಧಿಸಿದ ಜನಪ್ರತಿನಿಧಿಗಳು ಕೂಡ ನೀರು ಹರಿಯುವಿಕೆ ಆರಂಭವಾದ ಮೇಲೆ ಸ್ವಾಗತಿಸಲು ಶುರುವಿಟ್ಟುಕೊಂಡರು. ನೀರು ತಮ್ಮ ಕ್ಷೇತ್ರದ ಕೆರೆಗಳಿಗೆ ಹರಿಯಬೇಕೆಂದು ಹಠ ಹಿಡಿದರು. ಬರುತ್ತಿದ್ದ ನೀರನ್ನೇ ತಮ್ಮ ಕ್ಷೇತ್ರಗಳತ್ತ ತೆಗೆದುಕೊಂಡು ಹೋಗಲು ಆತುರಪಟ್ಟರು. ಆದರೂ, ಕೆ.ಸಿ. ವ್ಯಾಲಿ ನೀರು ತನ್ನದೇ ಇತಿಮಿತಿಯಲ್ಲಿ ಕೋಲಾರ ತಾಲೂಕಿನ 80 ಕೆರೆಗಳನ್ನು ಮತ್ತು ಯೋಜನೆ ವ್ಯಾಪ್ತಿಯಲ್ಲಿಯೇ ಇಲ್ಲದ ಬೆಂಗಳೂರು ತಾವರೆಕೆರೆ ಸುತ್ತಮುತ್ತಲಿನ ಎರಡು ಕೆರೆಗಳನ್ನು ತುಂಬಿಸಿದೆ. ಕೋಲಾರ ತಾಲೂಕಿನಲ್ಲಿ ಕೆರೆಯಿಂದ ಕೆರೆಗೆಹರಿ ಯುತ್ತಿರುವ ನೀರು ಮಾರ್ಗಮಧ್ಯೆ 113 ಚೆಕ್ ಡ್ಯಾಂಗಳನ್ನು ತುಂಬಿಸಿದೆ. ಸದ್ಯಕ್ಕೆ ಈ ಭಾಗದ ಅಂತರ್ಜಲ ಹೆಚ್ಚಳವಾಗಿರುವುದರಿಂದ ರೈತಾಪಿ ವರ್ಗ ಸಂತಸದಿಂದಿದ್ದಾರೆ. ಆದರೆ, ಇದೇ ಯೋಜನೆಯ ಬಾಲಂಗೋಚಿ ತಾಲೂಕಿನವರು ಕೆ.ಸಿ.ವ್ಯಾಲಿ ನೀರಿಗಾಗಿ ಕಾದು ಕುಳಿತಿದ್ದಾರೆ.
ವರದಾನ ಕನಸು: ಕೋಲಾರ ಜಿಲ್ಲೆಗೆ ವರದಾನವೆಂದು ಭಾವಿಸಿದ್ದ ಕೆ.ಸಿ.ವ್ಯಾಲಿ ಯೋಜನೆ ಕೇವಲ ಕೋಲಾರ ತಾಲೂಕು ಹಾಗೂ ಸುತ್ತಮುತ್ತಲಿನ ಒಂದೆರೆಡು ಕೆರೆಗಳಿಗೆ ಸೀಮಿತವಾಗಿಬಿಡುತ್ತದಾ ಎಂಬ ಅನುಮಾನವಂತು ಇಡೀ ಜಿಲ್ಲೆಯ ರೈತಾಪಿ ವರ್ಗವನ್ನು ಕಾಡುತ್ತಲೇ ಇದೆ.