Advertisement

ನುಗ್ಗೆ ತವರಲ್ಲಿ ಸಿಂಗಂ ನಗು ಬೀರುವರೇ?

01:30 AM Apr 02, 2021 | Team Udayavani |

ಜಿದ್ದಾಜಿದ್ದಿ: ಕೆ. ಅಣ್ಣಾಮಲೈ (ಬಿಜೆಪಿ), ಆರ್‌. ಇಳಾಂಗೊ (ಡಿಎಂಕೆ), ಅನಿಶಾ ಪ್ರವೀಣ್‌ (ಎನ್‌ಟಿಕೆ), ಮೊಹ್ಮದ್‌ ಹನೀಫ್ ಸಾಹೀಲ್‌ (ಎಂಎನ್‌ಎಂ), ಪಿ.ಎಸ್‌.ಎನ್‌. ತಂಗವೇಲು (ಎಎಂಎಂಕೆ).

Advertisement

“ನುಗ್ಗೆಕಾಯಿ ತವರು’, “ಕೋಳಿ ಅಂಕ’ದ ಖದರ್‌ಗೆ ಹೆಸರಾದ ಅರವಾಕುರಿಚಿಗೆ ಬೆಂಗಳೂರಿನಿಂದ ಕೇವಲ 323 ಕಿ.ಮೀ.ಗಳಷ್ಟೇ ದೂರ. “ಕರುನಾಡ ಸಿಂಗಂ’ ಎಂದು ಬಣ್ಣಿಸಲ್ಪಡುವ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಇಲ್ಲಿ ಚುನಾವಣೆಗೆ ನಿಂತಿದ್ದರಿಂದಾಗಿ, ಕನ್ನಡಿಗರ ಮನಸ್ಸಿಗೆ ಈ ಕ್ಷೇತ್ರ ತುಸು ಹತ್ತಿರಕ್ಕೆ ಬಂದಿದೆ.

ಎಐಎಡಿಎಂಕೆ ಜತೆಗಿನ ಮೈತ್ರಿಯಲ್ಲಿ ಬಿಜೆಪಿ ಪಾಲಿಗೆ ಸಿಕ್ಕ 22 ಕ್ಷೇತ್ರಗಳ ಪೈಕಿ ಅರವಾಕುರಿಚಿ ಕೂಡ ಒಂದು. ಆದರೆ ಇಲ್ಲಿ ಎಐಎಡಿಎಂಕೆಯ ಮೈತ್ರಿಬಲ ಬಿಟ್ಟರೆ ಬಿಜೆಪಿಗೆ ಯಾವುದೇ ಅಡಿಪಾಯಗಳಿಲ್ಲ. ಇದನ್ನರಿತೇ ಕರ್ನಾಟಕದ ಅಣ್ಣಾಮಲೈ ತಮ್ಮ ಐಪಿಎಸ್‌ ಹುದ್ದೆ ತೊರೆದು, ವರ್ಷ ಮುಂಚಿತವಾಗಿ ತವರೂರಿನ ಕ್ಷೇತ್ರದಲ್ಲಿ ನೆಲೆಸಿದರು. ಹಳ್ಳಿ ಹಳ್ಳಿಗಳನ್ನು ಸುತ್ತಿ, ಯುವಕರ ಪಡೆ ಕಟ್ಟಿ, ಸ್ಥಳೀಯರ ವಿಶ್ವಾಸ ಗೆದ್ದು, ಬಿಜೆಪಿಯ ಹೈಕಮಾಂಡ್‌ಗೂ ತಾನು ಇಲ್ಲಿಂದ ಟಿಕೆಟ್‌ಗೆ ಅರ್ಹ ಎಂದು ಮನದಟ್ಟು ಮಾಡಿಸಿದರು.

ಬೇರೆಲ್ಲ ಪಕ್ಷಗಳು ಹೊರಗಿನ ವ್ಯಕ್ತಿಗಳನ್ನು ತಂದು ನಿಲ್ಲಿಸಿದ್ದರಿಂದಾಗಿ, ಅಣ್ಣಾಮಲೈ ಅರವಾಕುರಿಚಿಯಲ್ಲಿ “ಭೂಮಿಪುತ್ರ’ ಕಾರ್ಡ್‌ ಪ್ಲೇ ಮಾಡುತ್ತಿದ್ದಾರೆ. 2016 ರಲ್ಲಿ ಇಲ್ಲಿ ಎಐಎಡಿಎಂಕೆಯಿಂದ ಗೆದ್ದು ಸಚಿವರಾಗಿದ್ದ ವಿ. ಸೆಂಥಿಲ್‌ ಬಾಲಾಜಿ, ಅನಂತರದಲ್ಲಿ ಪದವಿ ಕಳೆದುಕೊಂಡು ಡಿಎಂಕೆಗೆ ಸೇರಿ, 2019ರಲ್ಲಿ ಇಲ್ಲಿಂದ ಮತ್ತೆ ಉಪಚುನಾವಣೆಯಲ್ಲಿ ಗೆದ್ದಿದ್ದರು. ಚುನಾವಣೆಗೆ ಕೆಲವೇ 2 ತಿಂಗಳಿರುವಾಗ ಸಚಿವ ಹುದ್ದೆ ಅವಧಿಯಲ್ಲಿ ನಡೆಸಿದ ಹಗರಣದ ತನಿಖೆಗೆ ಮರುಜೀವ ಸಿಕ್ಕಿದ್ದರಿಂದಾಗಿ, ಸೆಂಥಿಲ್‌ಗೆ ಟಿಕೆಟ್‌ ಕೈತಪ್ಪಿದೆ. ಇದು ಕಡೇ ಕ್ಷಣದಲ್ಲಿ ಡಿಎಂಕೆಗೆ ಆದ ಹಿನ್ನಡೆ.

ಹಿಂದುಳಿದ ಜನಾಂಗಗಳ ಮತಗಳ ಮೇಲೆ ಕಣ್ಣಿಟ್ಟೇ ಡಿಎಂಕೆ ಆರ್‌. ಇಳಾಂಗೊರನ್ನು ಇಳಿಸಿದೆ. ಪಲ್ಲಾಪಟ್ಟಿಯ 35 ಸಾವಿರ ಮುಸ್ಲಿಮರ ನಿರ್ಣಾಯಕ ಮತಗಳನ್ನು ಡಿಎಂಕೆ ನಂಬಿದೆ. ಆದರೆ ಅದೇ ಮತಗಳ ಮೇಲೆ ಎಂಎನ್‌ಎಂ, ಎನ್‌ಟಿಕೆ, ಎಎಂಎಂಕೆ ಪಕ್ಷಗಳೂ ಕಣ್ಣಿಟ್ಟಿರುವುದೂ ಡಿಎಂಕೆಗೆ ಸವಾಲಿನ ವಿಚಾರ.

Advertisement
Advertisement

Udayavani is now on Telegram. Click here to join our channel and stay updated with the latest news.

Next