Advertisement

ಜ್ಯೋತಿರ್ಲಿಂಗ ದರ್ಶನ; ಮೊಳಗಿದ ಶಿವನಾಮ

06:12 PM Mar 12, 2021 | Team Udayavani |

ಕಲಬುರಗಿ: ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಗುರುವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶಿವನ ಮಂದಿರಗಳಿಗೆ ಭಕ್ತರು ಕುಟುಂಬ ಸಮೇತರಾಗಿ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಿ ಶಿವನಾಮ ಸ್ಮರಣೆ ಮಾಡಿದರು. ಕೆಲವರು ದಿನವಿಡಿ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರು.

Advertisement

ಇಲ್ಲಿನ ಇತಿಹಾಸ ಪ್ರಸಿದ್ಧ ರಾಮತೀರ್ಥ ದೇವಸ್ಥಾನ, ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರ, ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹಬ್ಬದ ಅಂಗವಾಗಿ ದೇಗುಲಗಳು ಮತ್ತು ಶಿವಲಿಂಗಗಳಿಗೆ ವಿಶೇಷ ಅಲಂಕಾರ ಮಾಡಿದ್ದನ್ನು ಕಂಡು ಭಕ್ತರು ಪುನೀತರಾದರು.

ಸೇಡಂ ರಸ್ತೆಯಲ್ಲಿರುವ ಅಮೃತ ಸರೋವರದಲ್ಲಿ ಭಕ್ತರ ದಂಡೇ ನೆರೆದಿತ್ತು. ಶಿವರಾತ್ರಿ ಪ್ರಯುಕ್ತ ವಿಶೇಷವಾದ ಅಲಂಕಾರದಿಂದ ಅಮೃತ ಸರೋವರ ಕಂಗೊಳಿಸುತ್ತಿತ್ತು. ಇಲ್ಲಿನ ಪರಿಸರ ಪ್ರವೇಶಿಸುತ್ತಿದ್ದಂತೆ ಆಕರ್ಷಕ ಬೃಹತ್‌ ಶಿವಲಿಂಗ ಸೆಳೆಯುತ್ತಿತ್ತು. ಅದರಲ್ಲೂ ಈ ಬಾರಿ ಹಬ್ಬದ ಅಂಗವಾಗಿ ಲಿಂಗವನ್ನು ಸಂಪೂರ್ಣವಾಗಿ ಮುತ್ತಿನಿಂದ ಸಿಂಗಾರ ಮಾಡಲಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚು ಬಿಳಿ ಮತ್ತು ಚಿನ್ನದ ಬಣ್ಣದ ಮುತ್ತುಗಳಿಂದ ಅಲಂಕೃತಗೊಂಡಿದ್ದ
ಶಿವಲಿಂಗವು ಹಬ್ಬದ ಕಳೆ ಹೆಚ್ಚಿಸಿತ್ತು.

ಶಾಶ್ವತವಾಗಿ ಸ್ಥಾಪಿಸಿರುವ ದ್ವಾದಶ (12) ಜ್ಯೋತಿರ್ಲಿಂಗಗಳನ್ನು ವಿಶೇಷವಾಗಿ ಅಲಂಕಾರ ಗೊಳಿಸಲಾಗಿತ್ತು. ಸೋಮನಾಥೇಶ್ವರ, ನಾಗೇಶ್ವರ,
ಶ್ರೀಶೈಲ ಮಲ್ಲಿಕಾರ್ಜುನ, ಮಹಾ ಕಾಳೇಶ್ವರ, ಓಂಕಾರೇಶ್ವರ, ವೈದ್ಯನಾಥ, ಭೀಮಾ ಶಂಕರ, ರಾಮೇಶ್ವರ, ವಿಶ್ವನಾಥ, ತ್ರಯಂಬ ಕೇಶ್ವರ, ಕೇದಾರನಾಥ, ಘೃಷ್ಣೇಶ್ವರ ಜ್ಯೋತಿರ್ಲಿಂಗಗಳಿಗೆ ವಿವಿಧ ಬಗೆಯ ವೈಭವದ ಅಲಂಕಾರದಿಂದ ಭಕ್ತರ ಗಮನ ಸೆಳೆದವು. ಕಡಲ ಚಿಪ್ಪುಗಳು, ರುದ್ರಾಕ್ಷಿ, ಹತ್ತು ಮುಖ ಬೆಲೆಯ ನೋಟುಗಳು, ದ್ರಾಕ್ಷಿ, ಗೋಡಂಬಿ, ಸಿರಿಧಾನ್ಯ… ಹೀಗೆ ಪ್ರತಿ ಒಂದು ಜ್ಯೋತಿರ್ಲಿಂಗಕ್ಕೂ ವಿಶೇಷ ಅಲಂಕಾರ ಕಂಡು, ದರ್ಶನ ಪಡೆಯುವ ಮೂಲಕ ಭಕ್ತರು ಪುಳಕಿತಗೊಂಡರು.

ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೂ ಹಬ್ಬದ ಅಂಗವಾಗಿ ಭಕ್ತರು ದಂಡು ಹರಿಬಂದಿತ್ತು. ಮಧ್ಯಾಹ್ನದ ಸುಡು ಬಿಲಿಸಿನಲ್ಲೂ ದೇವರ ದರ್ಶನ ಪಡೆದು ಪಾವನರಾದರು. ಆಳಂದ ರಸ್ತೆಯಲ್ಲಿರುವ ರಾಮತೀರ್ಥದಲ್ಲೂ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು. ಶಿವಲಿಂಗ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.

Advertisement

ಪಾರ್ವತಿ, ಪರಮೇಶ್ವರ, ಗಣಪತಿ, ಶಿವಲಿಂಗವನ್ನು ವಿಶೇಷ ಅಲಂಕಾರಿಕ ಹೂಗಳೊಂದಿಗೆ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ದೇವರ ದರ್ಶನ ಪಡೆಯಲು
ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಉದ್ದನೆ ಸಾಲಿನಲ್ಲಿ ನಿಂತ ಭಕ್ತರು ಶಾಂತಚಿತ್ತದಿಂದ ದರ್ಶನ ಪಡೆದರು.

ವಿಜಯ ನಗರ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನ, ಖೂಬಾ ಪ್ಲಾಟ್‌ ಪ್ರದೇಶದ ಶಿವ ದೇವಾಲಯ, ಹೊಸ ಜೇವರ್ಗಿ ರಸ್ತೆಯ ಕೃಷ್ಣೇಶ್ವರ ದೇವಾಲಯ ಸೇರಿದಂತೆ ಹಲವೆಡೆಯ ಶಿವ ಮಂದಿರ,  ಈಶ್ವರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಪೂಜಾ-ಕೈಂಕರ್ಯ ನೆರವೇರಿಸಿ ಮಹಾಶಿವರಾತ್ರಿಯ
ಭಕ್ತಿ, ಭಾವ ಮೆರೆದರು.

ಭಕ್ತರು ಶಿವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಶಿವನಾಮ ಸ್ಮರಣೆ ಮಾಡಿದರು.ನಿರಾಹಾರಿಗಳಾಗಿದ್ದ ಭಕ್ತರು ಹಾಲು, ಹಣ್ಣು ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ, ಮನೆಗಳಲ್ಲೂ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಪೂಜೆ, ಪುನಸ್ಕಾರಗಳು ಜರುಗಿದವು. ಮನೆಯಂಗಳದಲ್ಲೂ ರಂಗೋಲಿ
ಮೂಲಕ ಶಿವ ಲಿಂಗಗಳನ್ನು ಬಿಡಿಸಿ ಭಕ್ತಿ ಮರೆದರು.

Advertisement

Udayavani is now on Telegram. Click here to join our channel and stay updated with the latest news.

Next