ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಆರ್ಚರಿ ತಂಡ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ.
ಭಾರತದ ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್ ದೇವತಲೆ ಅವರು ಕೊರಿಯಾದ ಚೇವಾನ್ ಮತ್ತು ಜೂ ಜೇಹೂನ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಭಾರತ ಏಷ್ಯನ್ ಗೇಮ್ಸ್ ಪದಕ ಬೇಟೆಯನ್ನು ಮುಂದುವರೆಸಿದೆ.
ಮೊದಲ ಸೆಟ್ ನಲ್ಲಿ ಫರ್ಫಕ್ಟ್ 10 ಗೆ ಗುರಿಯಿಟ್ಟ ಭಾರತದ ಆರ್ಚರಿಗಳು, ಕೊರಿಯಾದಿಂದ ತೀವ್ರ ಪೈಪೋಟಿ ಎದುರಿಸಿತು. ಅಂತಿಮವಾಗಿ ಭಾರತ 159 ಅಂಕಗಳನ್ನು ಪಡದರೆ, ಕೊರಿಯಾ 158 ಅಂಕಗಳನ್ನು ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿತು. ಆ ಮೂಲಕ ಜ್ಯೋತಿ ಮತ್ತು ಓಜಸ್ ಅವರು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತವು ತಮ್ಮ 71 ನೇ ಪದಕವನ್ನು ಗಳಿಸುವಂತೆ ಮಾಡಿದರು. 2018 ರ ಜಕಾರ್ತಾ ಕ್ರೀಡಾಕೂಟದಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಭಾರತ ನಾಲ್ಕು ವರ್ಷಗಳ ಹಿಂದೆ ಸಾಧಿಸಿದ್ದ 16 ಚಿನ್ನದ ಪದಕಗಳನ್ನು ಸರಿಗಟ್ಟಿದೆ.
ಸೆಮಿಫೈನಲ್ ನಲ್ಲಿ ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್ ದೇವತಲೆ ಖಜಕಿಸ್ತಾನವನ್ನು ಸೋಲಿಸಿ, ಫೈನಲ್ ಗೆ ಲಗ್ಗೆಯಿಟ್ಟಿತ್ತು.
35 ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತದ ರಾಮ್ ಬಾಬೂ ಮತ್ತು ಮಂಜು ರಾಣಿ ಮಿಶ್ರ ತಂಡ ಕಂಚು ಗೆದ್ದರು.
ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ನಲ್ಲಿ ಇಂಡೋನೇಷ್ಯಾದ ಆಟಗಾರ್ತಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಗೇರಿದ್ದಾರೆ. ಹೆಚ್ ಎಸ್ ಪ್ರಣಾಯ್ ಕೂಡ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.