Advertisement

ಜಾತ್ರೆಯಲಿ ನಾಟಕ ಪ್ರದರ್ಶನಕೆ ಅವಕಾಶ ನೀಡಿ

07:32 PM Jan 09, 2022 | Team Udayavani |

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮ ಅನುಸರಿಸಿ ನಾಟಕ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಗುಳೇದಗುಡ್ಡದ ಶ್ರೀ ಸಂಗಮೇಶ್ವರ ಸಾಂಸ್ಕೃತಿಕ ಮತ್ತು ನಾಟ್ಯ ಸಂಘದ ಮಾಲೀಕೆ ಜ್ಯೋತಿ ಗುಳೇದಗುಡ್ಡ ಆಗ್ರಹಿಸಿದರು.

Advertisement

ಪಟ್ಟಣದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರು ದುಡಿಯಲು ಅವಕಾಶ ಕಲ್ಪಿಸಬೇಕು. ಕಲಾವಿದರಿಗೆ ಬನಶಂಕರಿ ಜಾತ್ರೆಯಲ್ಲಿ ಒಂದು ತಿಂಗಳು ಕಲೆ ಪ್ರದರ್ಶನ ಮಾಡಿದರೆ ಮುಂದಿನ ಒಂದು ವರ್ಷದ ಜೀವನ ನಡೆಯುತ್ತದೆ. ಎರಡು ವರ್ಷಗಳಿಂದ ನಾಟಕ ಬಂದ್‌ ಆಗಿರುವುದರಿಂದ ಎಲ್ಲ ಕಲಾವಿದರು ಕಷ್ಟದಲ್ಲಿ ಇದ್ದಾರೆ. ಜೀವನ ನಡೆಸಲು, ಕುಟುಂಬ ನಿರ್ವಹಣೆ ಮಾಡಲು ಕಲಾವಿದರು ಪರದಾಡುವಂತಾಗಿದೆ.

ಕಲಾವಿದರ ಸಮಸ್ಯೆಗೆ ಪರಿಹಾರ ನೀಡಲು ಕೋವಿಡ್‌ ನಿಯಮ ಅನುಸರಿಸಿ ಮಾಸ್ಕ್, ಸ್ಯಾನಿಟೈಸರ್‌ ಮತ್ತು ಸಾಮಾಜಿಕ ಅಂತರದೊಂದಿಗೆ ಶೇ. 50 ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದಿದ್ದರೆ ಎಲ್ಲ ಕಲಾವಿದರು ಸಭೆ ಸೇರಿ ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಬನಶಂಕರಿಯಿಂದ ಬಾದಾಮಿವರೆಗೆ ಮತ್ತು ಜಿಲ್ಲಾಡಳಿತದವರೆಗೆ ಪಾದಯಾತ್ರೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು. ಜಿಲ್ಲಾಡಳಿತ ಮತ್ತು ಸರಕಾರ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಲಾವಿದ ರಾಜಮಹ್ಮದ ಮುಲ್ಲಾ ಮಾತನಾಡಿ, ಜಾನಪದ ಕಲೆಗಳಲ್ಲಿ ಒಂದಾದ ನಾಟಕ ಕಲೆ ಅವಸಾನದ ಅಂಚಿನಲ್ಲಿದ್ದು, ಕಲೆ ಕಲಾವಿದರನ್ನು ಉಳಿಸಲು ಸರಕಾರ ಕ್ರಮ ವಹಿಸಬೇಕು. ನಾಟಕ ಬಂದ್‌ ಮಾಡಿದರೆ ಕಲಾವಿದರು ಬದುಕುವುದು ಹೇಗೆ? ಸಾಲ ಮಾಡಿ ನಾಟಕ ನಡೆಸುತ್ತಿದ್ದಾರೆ. ಈ ಬಾರಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದಿದ್ದರೆ ಕಲಾವಿದರು ಮತ್ತಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಾರೆ ಎಂದರು. ಇನ್ನೋರ್ವ ಕಲಾವಿದ ಮಂಜುನಾಥ ಗುಳೇದಗುಡ್ಡ ಮಾತನಾಡಿ, ಸರಕಾರ ಚುನಾವಣೆ ಬಂದಾಗ ಜನರನ್ನು ಕೂಡಿಸುತ್ತಾರೆ.

Advertisement

ಆದರೆ, ಜಾತ್ರೆ ಹಬ್ಬ ಹರಿದಿನಗಳನ್ನು ಮಾಡಲು ಕೊರೊನಾ ಬರುತ್ತಿದೆಯೇ ಎಂದು ಪ್ರಶ್ನಿಸಿದರು. ಚುನಾವಣೆ ಬಂದಾಗ ನೀತಿ ಸಂಹಿತೆ, ಕೊರೊನಾ ನೆಪವೊಡ್ಡಿ ಬನಶಂಕರಿ ಜಾತ್ರೆ ಬಂದ್‌ ಮಾಡಿದರೆ ಇದನ್ನೇ ನಂಬಿ ಜೀವನ ನಡೆಸುವವರ ಗತಿ ಏನು ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶೇಖಪ್ಪ ಹೊಸಮನಿ, ರಾಜಮಹ್ಮದ ಮುಲ್ಲಾ, ಲಾಳೇಶ ಕರ್ಜಗಿ, ಮಂಜುನಾಥ ಗುಳೇದಗುಡ್ಡ, ಬಸೀರ ತಾಳಿಕೋಟಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next