ಟೊರಾಂಟೊ: ಅವಧಿಗಿಂತ ಮೊದಲೇ ಕೆನಡಾ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ಸತತ 3ನೇ ಬಾರಿಗೆ ಟ್ರುಡೋ ಗೆದ್ದಂತಾಗಿದೆ.
ಸಂಸತ್‌ನ ಕೆಳಮನೆ, ಹೌಸ್ ಆಫ್ ಕಾಮನ್ಸ್‌ನಲ್ಲಿ ಒಟ್ಟು 338 ಸ್ಥಾನಗಳಿದ್ದು, ಬಹುಮತಕ್ಕೆ 170 ಸ್ಥಾನಗಳು ಬೇಕಾಗಿತ್ತು. ಸದ್ಯ ಪ್ರಕಟವಾಗಿರುವ ಫಲಿತಾಂಶ ಪ್ರಕಾರ, ಲಿಬರಲ್ ಪಕ್ಷ 156 ಸ್ಥಾನಗಳಲ್ಲಿ ಜಯ ಗಳಿಸಿದೆ. ಬಹುಮತಕ್ಕೆ 14 ಸ್ಥಾನಗಳ ಕೊರತೆ ಇದೆ.
2019ರ ಚುನಾವಣೆಯಲ್ಲಿ ಲಿಬರಲ್ ಪಕ್ಷ 157 ಸ್ಥಾನಗಳನ್ನು ಗಳಿಸಿತ್ತು. ಪ್ರತಿಪಕ್ಷ ಕನ್ಸರ್ವೇಟಿವ್ 121 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಭಾರತದ ಮೂಲದ ಸಂಸದ ಜಗ್‌ಮೀತ್ ಅವರ ನ್ಯೂ ಡೆಮಾಕ್ರಾಟಿಕ್ ಪಕ್ಷ ಹಾಲಿ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ:ಗ್ಯಾಂಬ್ಲಿಂಗ್: ಪೊಲೀಸ್ ಕಾಯ್ದೆಗೆ ತಿದ್ದುಪಡಿಗೆ ಕ್ರಮ: ಗೃಹ ಸಚಿವ
ಹಿಂದಿನ ಚುನಾವಣೆಯಲ್ಲಿ ಈ ಪಕ್ಷಕ್ಕೆ 24 ಸೀಟುಗಳು ಲಭ್ಯವಾಗಿದ್ದವು. ಬ್ಲಾಕ್ ಕ್ಯುಬೆಕೋಯಿಸ್ ಪಕ್ಷಕ್ಕೆ 34, ಗ್ರೀನ್ ಪಾರ್ಟಿಗೆ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ಗಮನಾರ್ಹ ಅಂಶವೆಂದರೆ ಭಾರತೀಯ ಮೂಲದ 17 ಮಂದಿ ಮತ್ತೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಕೆನಡಾ ಸಂವಿಧಾನ ಪ್ರಕಾರ ಸಂಸತ್‌ನ ಅಧಿಕಾರದ ಅವಧಿ ನಾಲ್ಕು ವರ್ಷಗಳು.