ಲಾವೋಸ್ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಶುಕ್ರವಾರ(ಅ11) ಲಾವೋಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ “ಸಂಕ್ಷಿಪ್ತ ವಿಚಾರ ವಿನಿಮಯ ” ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಖಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಂತರ ಭಾರತ ಮತ್ತು ಕೆನಡಾ ಸಂಬಂಧ ಹಳಸಿತ್ತು. ಭಾರತವೇ ನಿಜ್ಜರ್ ಹತ್ಯೆ ಮಾಡಿಸಿದೆ ಎಂಬ ಹಿಂದಿನ ಆರೋಪಗಳ ಕುರಿತು ಪ್ರಸ್ತಾಪಿಸಿದಾಗ, ಟ್ರುಡೊ ”ಕೆನಡಿಯನ್ನರ ಸುರಕ್ಷತೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವ” ಕುರಿತು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಜಸ್ಟಿನ್ ಟ್ರುಡೊ “ನಾವು ಮಾಡಬೇಕಾದ ಕೆಲಸವಿದೆ ಎಂದು ನಾನು ಒತ್ತಿಹೇಳಿದೆ. ನಾವು ಏನು ಮಾತನಾಡಿದ್ದೇವೆ ಎಂಬುದರ ಕುರಿತು ನಾನು ವಿವರ ನೀಡಲು ಹೋಗುವುದಿಲ್ಲ, ಕೆನಡಿಯನ್ನರ ಸುರಕ್ಷತೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವುದು ಕೆನಡಾದ ಸರಕಾರದ ಮೂಲಭೂತ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ ಮತ್ತು ಅದನ್ನೇ ನಾನು ಮಾಡುತ್ತೇನೆ ಎನ್ನುವುದು ಗಮನದಲ್ಲಿರಲಿ ”ಎಂದು ಹೇಳಿದ್ದಾರೆ.
ಕೆನಡಾದ ವಲಸೆ ನೀತಿಯಿಂದಾಗಿ ಭಾರತೀಯ ವಿದ್ಯಾರ್ಥಿಗಳು ಗಡಿಪಾರಿನ ಭೀತಿಯನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಕೆನಡಾದ ಬ್ರ್ಯಾಂಪ್ಟನ್‌ನ ರೆಸ್ಟೋರೆಂಟ್ ಒಂದರಲ್ಲಿ ತಿನಿಸುಗಳನ್ನು ಬಡಿಸುವ ವೇಟರ್ ಮತ್ತು ಸರ್ವರ್ ಕೆಲಸಕ್ಕಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿ ಗಳು ಸಾಲು ನಿಂತಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿ ಕಳವಳಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಅವರು ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಾಗಿ ಲಾವೋಸ್‌ಗೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.