ಒಟ್ಟಾವಾ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಕಳೆದ ಐದಾರು ದಿನಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಬೆಂಬಲ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇದೊಂದು ಅನುಚಿತ ಮತ್ತು ಅನವಶ್ಯಕ ಹೇಳಿಕೆ ಎಂದು ತಿರುಗೇಟು ನೀಡಿದೆ.
ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ನೀಡಿರುವ ಹೇಳಿಕೆ ಕುರಿತು ಪ್ರಶ್ನಿಸಿದ ಸುದ್ದಿಗಾರರಿಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಕಷ್ಯಪ್, ಇದು ಭಾರತದ ಆಂತರಿಕ ವಿಷಯ, ಈ ಬಗ್ಗೆ ಹೇಳಿಕೆ ನೀಡುವುದು ಅನವಶ್ಯಕ. ಎಂದು ತಿಳಿಸಿದ್ದರು.
ಭಾರತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಕೆನಡಾ ಪ್ರಧಾನಿ ಕೆಲವು ಅನವಶ್ಯಕವಾದ ಪ್ರತಿಕ್ರಿಯೆ ನೀಡಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ಹೇಳಿಕೆಯ ಅಗತ್ಯವಿಲ್ಲ, ಮುಖ್ಯವಾಗಿ ಪ್ರಜಾಪ್ರಭುತ್ವ ದೇಶವೊಂದರ ಆಂತರಿಕ ವಿಚಾರವಾಗಿದೆ. ರಾಜಕೀಯ ಉದ್ದೇಶಕ್ಕಾಗಿ ರಾಜತಾಂತ್ರಿಕ ವ್ಯವಹಾರವನ್ನು ತಪ್ಪಾಗಿ ನಿರೂಪಿಸಬಾರದು ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.
ಭಾರತದಲ್ಲಿ ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ದೆಹಲಿ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಮೊದಲ ಅಂತಾರಾಷ್ಟ್ರೀಯ ನಾಯಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಏಡ್ಸ್ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್
ಕೆನಡಾದಲ್ಲಿ ಭಾರೀ ಸಂಖ್ಯೆಯಲ್ಲಿ ಸಿಖ್ ಸಮುದಾಯದ ಜನರು ವಾಸವಾಗಿದ್ದಾರೆ. ಕೆನಡಾ ಕ್ಯಾಬಿನೆಟ್ ನಲ್ಲಿ ಹಲವಾರು ಮಂದಿ ಭಾರತೀಯ ಮೂಲದ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಮೊದಲು ಕೆನಡಾ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಅವರು ಟ್ವೀಟರ್ ನಲ್ಲಿ, ಭಾರತದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಮಾನವೀಯತೆಯಿಂದ ತೊಂದರೆ ಕೊಡುತ್ತಿರುವುದಾಗಿ ವರದಿ ತಿಳಿಸಿದೆ. ಪಂಜಾಬ್ ನಲ್ಲಿ ನನ್ನ ನನ್ನ ಅನೇಕ ಸಂಬಂಧಿಗಳಿದ್ದಾರೆ. ತಮ್ಮ ಪ್ರೀತಿ ಪಾತ್ರರ ರಕ್ಷಣೆಯ ಬಗ್ಗೆ ಚಿಂತಿತರಾಗಿದ್ದಾರೆ. ಪ್ರಜಾಪ್ರಭುತ್ವ ದೇಶ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಬೇಕು. ಪ್ರತಿಭಟನೆಯಲ್ಲಿ ಭಾಗಿಯಾದವರು ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ್ದರು.