ಹುಮನಾಬಾದ: ಅಪ್ರಾಪ್ತ ಬಾಲಕಿಯರ ಮೇಲೆ ಮತ್ತು ಮಹಿಳೆಯರ ಮೇಲೆ ನಡೆಯುವ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಹಾಕಲು ಯತ್ನಿಸದೇ ನಮ್ಮನ್ನೇ ನಂಬಿ ಬರುವ ಬಡವರು, ಅಸಹಾಯಕರಿಗೆ ನ್ಯಾಯ ಒದಗಿಸುವ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾನವೀಯತೆ ಮೆರೆಯಬೇಕು ಎಂದು ನ್ಯಾಯಾಧೀಶರಾದ ಆಶೆಪ್ಪ ಬಿ.ಸಣ್ಮನಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಪ್ರಾ ಕಾರ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ದಿನಾಚರಣೆ ನಿಮಿತ್ತ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಥ ಪ್ರಕರಣ ಇತ್ಯರ್ಥಗೊಳಿಸುವ ವಿಷಯದಲ್ಲಿ ಅಧಿಕಾರಿಗಳ ಜೊತೆಗೆ ಪಾಲಕರ ಸಹಕಾರವೂ ಅತ್ಯಂತ ಅವಶ್ಯ ಎಂದರು.
ಬಾಲ್ಯ ವಿವಾಹ ಮತ್ತು ಮಹಿಳೆ ಮೇಲೆ ನಡೆಯುವ ವಿವಿಧ ರೀತಿಯ ದೌಜನ್ಯ ಪ್ರಕರಣದಲ್ಲಿ ಸಂತ್ರಸ್ತರು ಭಯದಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಾರೆ. ಅಂಥ ಸಂದರ್ಭದಲ್ಲಿ ಸಂತ್ರಸ್ತರು ದೂರು ನೀಡಿಲ್ಲ ಎಂದು ದಾರಿ ಕಾಯದೇ ಪೊಲೀಸ್ ಇಲಾಖೆ ಅಧಿಕಾರಿಗಳೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ನ್ಯಾಯ ಒದಗಿಸುವುದು ಕಾನೂನು ಬದ್ಧ ಕರ್ತವ್ಯ. ತನ್ಮೂಲಕ ಬಾಲ್ಯವಿವಾಹ, ಅಪ್ರಾಪ್ತ ಬಾಲಕಿಯರ ಮೇಲಿನ ದೈಹಿಕ- ಮಾನಸಿಕ ಹಿಂಸೆ ಸೇರಿದಂತೆ ವಿವಾಹಿತ ಮಹಿಳೆಯರಿಗೆ ವರದಕ್ಷಿಣೆ ನೆಪದಲ್ಲಿ ಕಿರುಕುಳ ನೀಡುವಂತಹ ಪ್ರಕರಣ ಯಾವುದೇ ಕಾರಣಕ್ಕೂ ಮುಚ್ಚಿಹಾಕುವಂತಿಲ್ಲ ಎಂದು ಹೇಳಿದರು.
ಬೇನಚಿಂಚೋಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸಾರಿಕಾ ಮಹಿಳೆಯರ ಸವಾಲು ಮತ್ತು ಸಬಲೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ಗಗನ್ ಎಂ.ಆರ್., ವಕೀಲರ ಸಂಘದ ತಾಲೂಕು ಅಧ್ಯಕ್ಷ ಶಂಭುಲಿಂಗ ಧುಮ್ಮನಸೂರೆ, ಉಪಾರ್ಧಯಕ್ಷ ಈಶ್ವರ ಸೋನಕೇರಾ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ, ವಕೀಲೆ ವಿರೇಖಾ ಪಾಟೀಲ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಅಧ್ಯಕ್ಷತೆ ವಹಿಸಿದ್ದರು.
ಭೀಮರಾವ್ ಓತಗಿ, ಪ್ರೌಢಶಾಲೆಯ ಉಪಪ್ರಾಚಾರ್ಯೆ ಜಿ.ಅನುಜಾ ಇದ್ದರು. ಶಿಕ್ಷಣ ಸಂಯೋಜಕ ಸಂಜೀವಕುಮಾರ ಸ್ವಾಗತಿಸಿದರು. ರಮೇಶ ರಾಜೋಳೆ ನಿರೂಪಿಸಿದರು.