ಆಳಂದ: ಅಲ್ಪಸಂಖ್ಯಾತರು ಮತ್ತು ಹಿಂದುವಳಿದವರ ಸಾಮಾಜಿಕ ನ್ಯಾಯಕ್ಕಾಗಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕಲಬುರಗಿಯ ಹಿರಿಯ ನ್ಯಾಯವಾದಿ ಎಚ್.ಎಂ. ಪಟೇಲ ಹೆಬಳಿ ಹೇಳಿದರು.
ಪಟ್ಟಣದ ಗುರುಭವನ ಆವರಣದಲ್ಲಿ ರವಿವಾರ ಆಲ್ ಇಂಡಿಯಾ ತಂಜೀಮ್-ಇ-ಇನ್ಸಾಫ್ (ಎಐಟಿಐ), ತಾಲೂಕು ಘಟಕ ಆಯೋಜಿಸಿದ್ದ ಪ್ರಥಮ ತಾಲೂಕು ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನಬದ್ಧ ಹಕ್ಕು ಪಡೆಯಲು ಕೆಲವು ಸಮುದಾಯಗಳು ಇನ್ನೂ ವಂಚಿತವಾಗಿವೆ. ಒಗ್ಗಟ್ಟಿನ ಕೊರತೆಯಿಂದ ಸರ್ಕಾರಿ ಸೌಲಭ್ಯಗಳು ದೊರಕುತ್ತಿಲ್ಲ. ಆದ್ದರಿಂದ ಶಿಕ್ಷಣ ಮತ್ತು ಜಾಗೃತಿ ಮೂಲಕ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಸೊಲ್ಲಾಪುರದ ಸಾಹಿತಿ, ಲೇಖಕ ಸಫìರಾಜ್ ಅಹ್ಮೆದ್ ಮಾತನಾಡಿ, ಜಾತಿ, ಧರ್ಮಗಳ ಮಧ್ಯ ಕಲಹ ಉಂಟುಮಾಡಿ ಸ್ವಾರ್ಥ ಸಾಧಿಸುವ ಪಟಭದ್ರ ಹಿತಾಸಕ್ತಿಗಳಿಗೆ ಮಾರು ಹೋಗದೇ, ನಿಜವಾದ ಇತಿಹಾಸ ಅರಿತು, ಶಿಕ್ಷಣ, ಸಂಘಟನೆ ಹೋರಾಟಕ್ಕೆ ಒತ್ತು ನೀಡಿ ನ್ಯಾಯ ಪಡೆಯಬೇಕು ಎಂದರು.
ಉಸ್ಮಾನಾಬಾದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ ರೇಣುಕೆ, ಹಿರಿಯ ಮುಖಂಡ ಮೌಲಾ ಮುಲ್ಲಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು. ಮುಖಂಡ ಸುಲೇಮಾನ ಮುಕುಟ್, ಅಧ್ಯಕ್ಷತೆ ವಹಿಸಿದ್ದ ಇನ್ಸಾಫ್ ಸಂಘಟನೆಯ ಕಲಿಲ ಅನ್ಸಾರಿ, ಅಹ್ಮದ್ ಅಲಿ ಚುಲಬುಲ್, ಕಿಸಾನಸಭಾ ಮುಖಂಡ ರಾಜಶೇಖರ ಬಸ್ಮೆ, ಸಿಪಿಐ ಮಾಜಿ ಕಾರ್ಯದರ್ಶಿ ಪದ್ಮಾಕರ ಜಾನಿಬ್, ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಫಕ್ರೋದ್ದೀನ್ ಗೋಳಾ ಮತ್ತಿತರರು ಇದ್ದರು. ಕೆ.ಯುವ ಇನಾಮದಾರ ನಿರೂಪಿಸಿದರು.