ಲಾಲೂ ಪ್ರಸಾದ್ ಯಾದವ್ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಗಿ ದ್ದರೂ ನ್ಯಾಯ ನಿರಾಕರಣೆಯಾಗಿಲ್ಲ ಎನ್ನುವುದೊಂದು ಸಮಾಧಾನ ಕೊಡುವ ಅಂಶ. ಬರೋಬ್ಬರಿ 22 ವರ್ಷಗಳ ಬಳಿಕ ಬಹುಕೋಟಿ ರೂಪಾಯಿ ಮೇವು ಹಗರಣದ ತೀರ್ಪು ಹೊರಬಿದ್ದಿದ್ದು, ನಿರೀಕ್ಷಿಸಿದಂತೆ ಲಾಲೂ ಜೈಲು ಪಾಲಾಗಿದ್ದಾರೆ. ಈ ಸಲ ಮೂರೂವರೆ ವರ್ಷ ಜೈಲು ಮತ್ತು 10 ಲ. ರೂ. ಜುಲ್ಮಾನೆ ವಿಧಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪಶು ಸಂಗೋಪನೆ ಇಲಾಖೆ ಮೇವು ಖರೀದಿಗಾಗಿ ಮೀಸಲಿಟ್ಟಿದ್ದ ಹಣ ವನ್ನು ನಕಲಿ ಬಿಲ್ ಸೃಷ್ಟಿಸಿ ಕಬಳಿಸಿದ್ದ ಈ ಪ್ರಕರಣ ಮೇವು ಹಗರಣವೆಂದೇ ಕುಖ್ಯಾತವಾಗಿತ್ತು. ರಾಜ್ಯದ ಬೊಕ್ಕಸಕ್ಕೆ 950 ಕೋ. ರೂ. ನಷ್ಟವುಂಟು ಮಾಡಿದ ಈ ಅವ್ಯವಹಾರ ಆ ಕಾಲದಲ್ಲಿ ಅತಿ ದೊಡ್ಡ ಮೊತ್ತವಾಗಿತ್ತು. ಲಾಲೂ ಮಾತ್ರವಲ್ಲದೆ ಇನ್ನಿತರ ಹಲವು ಪ್ರಮುಖ ರಾಜಕಾರಣಿಗಳು ಮತ್ತು ಐಎಎಸ್‌ಅಧಿಕಾರಿಗಳು ಒಳಗೊಂಡ ಈ ಹಗರಣದ ವಿಚಾರಣೆಗೆ ತೆಗೆದುಕೊಂಡ ಸಮಯ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಎಷ್ಟು ನಿಧಾನ ಗತಿಯಿಂದ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೊಂದು ಉದಾಹರಣೆ. ಮೇವು ಹಗರಣಕ್ಕೆ ಸಂಬಂದಿಸಿದಂತೆ ಲಾಲೂ ವಿರುದ್ಧ ಪ್ರಕಟವಾಗಿರುವ ಎರಡನೇ ತೀರ್ಪು ಇದು. 2013ರಲ್ಲಿ ಚಾಯಿಬಾಸಿ ಪ್ರಕರಣಕ್ಕೆ ಸಂಬಂಧಿಸಿ ದಂತೆ 5 ವರ್ಷ ಜೈಲು ಮತ್ತು 25 ಲ. ರೂ. ದಂಡ ವಿಧಿಸಲಾಗಿದೆ. ಕೆಲ ಸಮಯ ಜೈಲಿನಲ್ಲಿದ್ದ ಲಾಲೂ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಈ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆಯಿಲ್ಲ.
ದೇಶದ ರಾಜಕೀಯದಲ್ಲಿ ಲಾಲೂವಿನದ್ದೊಂದು ವಿಶಿಷ್ಟ ಪಾತ್ರ. ಹಿಂದೊಮ್ಮೆ ರಾಜಕೀಯದ ವಿದೂಷಕ ಎಂಬ ಲೇವಡಿಗೆ ಒಳಗಾಗಿದ್ದ ಅವರು ತಂತ್ರಗಾರಿಕೆಯ ವಿಷಯದಲ್ಲಿ ಮಾತ್ರ ಮಹಾನ್ ಚಾಣಾಕ್ಷ. ಸ್ವತಃ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲದಿದ್ದರೂ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಡು ವಿರೋಧಿಯಾಗಿದ್ದ ಜೆಡಿ(ಯು)ನ ನಿತೀಶ್ ಕುಮಾರ್ ಜತೆಗೆ ಸಖ್ಯ ಬೆಳೆಸಿ ಮಹಾಘಟ್‌ಬಂಧನ್ ಅನ್ನು ಅಧಿಕಾರಕ್ಕೆ ತರುವಲ್ಲಿ ಸಫಲವಾಗಿದ್ದರು. ರಾಷ್ಟ್ರ ರಾಜಕಾರಣದಲ್ಲೂ ತನ್ನದೇ ಆದ ಪ್ರಭಾವ ಹೊಂದಿರುವ ಲಾಲೂ 2019ರಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿತ್ತು. ಇನ್ನು ತನ್ನ ಪ್ರಾರಬ್ಧಕ್ಕೆಲ್ಲ ಬಿಜೆಪಿಯೇ ಕಾರಣ ಎಂದು ಲಾಲೂ ಮತ್ತು ಅವರ ಕುಟುಂಬ ವರ್ಗದವರು ದೂಷಿಸುವುದರ ಹಿಂದೆ ರಾಜಕೀಯ ಉದ್ದೇಶವಷ್ಟೇ ಇದೆಯಷ್ಟೆ. ಏಕೆಂದರೆ ಮೇವು ಹಗರಣ ಬಯಲಾದಾಗ ಕೇಂದ್ರದಲ್ಲಿ ಬಿಜೆಪಿ ಸರಕಾರವಿರಲಿಲ್ಲ. ತನಿಖೆಗೆ ಆದೇಶಿಸಿದ್ದೂ ಬಿಜೆಪಿ ಸರಕಾರವಲ್ಲ. ತೀರ್ಪು ಪ್ರಕಟವಾಗುವಾಗ ಬಿಜೆಪಿ ಸರಕಾರ ಇದೆ ಎಂದ ಮಾತ್ರಕ್ಕೆ ಅದುವೇ ತನ್ನನ್ನು ಜೈಲಿಗೆ ಹಾಕುತ್ತಿದೆ ಎಂದು ದೂರುವುದು ಲಾಲೂವಿನ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆಯಷ್ಟೆ.
ಮೇವು ಹಗರಣ ಮಾತ್ರವಲ್ಲದೆ ಲಾಲೂ ಮತ್ತು ಕುಟುಂಬದವರ ಮೇಲೆ ಇನ್ನೂ ಅನೇಕ ಆರೋಪಗಳಿವೆ. ಲಾಲೂ ಯಾದವ್ ಉತ್ತಮ ಚುನಾವಣಾ ತಂತ್ರಗಾರ ಆಗಿರಬಹುದು. ಆದರೆ ಅವರನ್ನು ಮುತ್ಸದ್ದಿ ಎಂದು ಕರೆಯಲು ಸಾಧ್ಯವಿಲ್ಲ. ಜೀವನದುದ್ದಕ್ಕೂ ಜಾತಿ ರಾಜಕಾರಣವೇ ಅವರ ಬಂಡವಾಳವಾಗಿತ್ತು. ಮೇಲ್ವರ್ಗ ಮತ್ತು ಕೆಳವರ್ಗದವರ ನಡುವೆ ವಿಭಜನೆಗೊಂಡಿದ್ದ ಬಿಹಾರದ ಸಾಮಾಜಿಕ ಸ್ಥಿತಿಯೇ ಅವರ ರಾಜಕೀಯ ಉತ್ಕರ್ಷಕ್ಕೆ ಮೆಟ್ಟಲಾಯಿತು. ತನ್ನನ್ನು ಕೆಳವರ್ಗದವರ, ದಮನಿತರ ಮತ್ತು ಅಲ್ಪಸಂಖ್ಯಾತರ ಉದ್ಧಾರಕನೆಂದು ಬಿಂಬಿಸಿಕೊಂಡ ಲಾಲೂ ಅವರಿಗಾಗಿ ಮಾಡಿದ್ದು ಅಷ್ಟರಲ್ಲೇ ಇದೆ. ಲಾಲೂ ಅಧಿಕಾರದಲ್ಲಿ ಬಿಹಾರ ದೇಶದ ಅತ್ಯಂತ ಹಿಂದುಳಿದ ರಾಜ್ಯವೆಂಬ ಕುಖ್ಯಾತಿಗೆ ಒಳಿತಾಗಿತ್ತು. ಅಧಿಕಾರದಿಂದ ಉದ್ಧಾರವಾದದ್ದು ಲಾಲೂ, ಅವರ ಕುಟುಂಬ ಮತ್ತು ಆಪೆ¤àಷ್ಟರು ಮಾತ್ರ. ಆದರೆ ಚುನಾವಣೆ ಗೆಲ್ಲುವ ಸಾಮರ್ಥ್ಯದಿಂದಾಗಿ ಅವರು ರಾಜಕೀಯದಲ್ಲಿ ಸದಾ ಮುನ್ನೆಲೆಯಲ್ಲಿರುತ್ತಿದ್ದರು ಅಷ್ಟೆ. ಈ ತೀರ್ಪಿನೊಂದಿಗೆ ಲಾಲೂ ರಾಜಕೀಯ ಜೀವನ ಬಹುತೇಕ ಅಂತ್ಯವಾದಂತೆ. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅಸಾಧ್ಯ ವಾಗಿರುವುದರಿಂದ ಲಾಲೂ ಇನ್ನು ಸ್ಪರ್ಧಿಸುವ ಆಸೆಯನ್ನು ಕೈಬಿಡಲೇ ಬೇಕು. ಜತೆಗೆ ವಯಸ್ಸು ಮತ್ತು ಕಾಯಿಲೆಗಳು ಅವರನ್ನು ಕಂಗೆಡಿಸಿವೆ. ಕಾನೂನಿನ ದೀರ್ಘ ಬಾಹುಗಳಿಂದ ಬಹಳ ಸಮಯ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವುದಕ್ಕೆ ಲಾಲೂ ಪ್ರಕರಣ ಸ್ಪಷ್ಟ ನಿದರ್ಶನ.