ಹೊಸದಿಲ್ಲಿ: ತಮ್ಮದೇ ವರ್ಗಾವಣೆಗೆ ತಾವೇ ತಡೆಯಾಜ್ಞೆ ವಿಧಿಸಿಕೊಂಡ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸೋಮವಾರ 7 ಮಂದಿ ನ್ಯಾಯ ಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.
ಕರ್ಣನ್ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ 7 ಮಂದಿ ನ್ಯಾಯಮೂರ್ತಿಗಳ ಪೀಠವೇ ಇದನ್ನೂ ವಿಚಾರಣೆ ನಡೆಸಲಿ ಎಂದು ನ್ಯಾ| ಅರುಣ್ ಮಿಶ್ರಾ ಮತ್ತು ನ್ಯಾ| ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ. ನ್ಯಾ|ಕರ್ಣನ್ ವಿರುದ್ಧ ದೂರು ನೀಡಿರುವ ಮದ್ರಾಸ್ ಹೈಕೋರ್ಟ್ ರಿಜಿಸ್ಟ್ರಾರ್ ಪರ ವಾದ ಮಂಡಿಸುತ್ತಿರುವ ನ್ಯಾ| ವೇಣುಗೋಪಾಲ್ ಅವರೂ ಇದನ್ನು ಸ್ವಾಗತಿಸಿದ್ದಾರೆ.
ಪತ್ರ ಬರೆದಿದ್ದ ನ್ಯಾ| ಕರ್ಣನ್: 2016ರ ಡಿ.21ರಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಪತ್ರ ಬರೆದಿದ್ದ ನ್ಯಾ| ಕರ್ಣನ್, ನನ್ನ ವಿರುದ್ಧದ ಪ್ರಕರಣದಲ್ಲಿ ನಾನೇ ವಾದ ಮಂಡಿಸುತ್ತೇನೆ. ಇದಕ್ಕೆ ಅವಕಾಶ ಕೊಡಿ ಎಂದು ಕೋರಿದ್ದರು. ಇನ್ನೊಂದೆಡೆ, ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, “ಹೈಕೋರ್ಟ್‌ನ ವಿವಿಧ ಕೇಸುಗಳ 12 ಕಡತಗಳು ಇನ್ನೂ ನ್ಯಾ| ಕರ್ಣನ್ ಅವರ ಬಳಿಯೇ ಇದ್ದು, ಅದನ್ನು ಅವರು ವಾಪಸ್ ನೀಡಿಲ್ಲ. ಜತೆಗೆ, ಅವರು ಮದ್ರಾಸ್ ಹೈಕೋರ್ಟ್‌ನಲ್ಲಿದ್ದಾಗ ಚೆನ್ನೈಯಲ್ಲಿ ನೀಡಲಾಗಿದ್ದ ನಿವಾಸವನ್ನು ಅವರಿನ್ನೂ ಖಾಲಿ ಮಾಡಿಲ್ಲ ಎಂದು ಆರೋಪಿಸಿದ್ದರು.
ಕೋರ್ಟ್‌ಗೆ ಹಾಜರಾಗಲಿಲ್ಲ: ಕರ್ಣನ್ ವಿರುದ್ಧ ಇತ್ತೀಚೆಗಷ್ಟೇ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಸೋಮ ವಾರ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಕುರಿತು ಶೋಕಾಸ್ ನೋಟಿಸ್ ಜಾರಿಯಾಗಿದ್ದರೂ, ಹಾಜರಾಗುವಲ್ಲಿ ನ್ಯಾ.ಕರ್ಣನ್ ವಿಫಲರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಅವರು ಏಕೆ ಹಾಜರಾಗಿಲ್ಲ ಎಂಬುದಕ್ಕೆ ಕಾರಣಗಳು ನಮಗೆ ತಿಳಿದಿಲ್ಲ. ಅವರು ಅವರ ಪರ ವಕೀಲರನ್ನೂ ನೇಮಿಸಿಲ್ಲ. ಹೀಗಾಗಿ, ವಿಚಾರಣೆ ಯನ್ನು ಮೂರು ವಾರಗಳ ಕಾಲ ಮುಂದೂಡು ತ್ತೇವೆ,’ ಎಂದು ಹೇಳಿತು. ಮದ್ರಾಸ್ ಹೈಕೋರ್ಟ್ ಸಿಜೆ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸಿಜೆಐ, ಪ್ರಧಾನಿ ಮೋದಿ ಮತ್ತಿತರರಿಗೆ ಕರ್ಣನ್ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ಕಳೆದ ವಾರವಷ್ಟೇ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.
ಏನಿದು ಪ್ರಕರಣ?: ನಿಂದನೀಯ ವರ್ತನೆ ಹಿನ್ನೆಲೆಯಲ್ಲಿ ಕಳೆದ ವರ್ಷ ನ್ಯಾ| ಕರ್ಣನ್ ಅವರನ್ನು ಮದ್ರಾಸ್ ಹೈಕೋರ್ಟ್ ನಿಂದ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಜತೆಗೆ, ಅವರಿಗೆ ನ್ಯಾಯಾಂಗದ ಯಾವುದೇ ಕೆಲಸ ಕಾರ್ಯಗಳನ್ನೂ ನೀಡಬಾರದು ಎಂದು ಸೂಚಿಸಿತ್ತು. ಆದರೆ, ಸುಪ್ರೀಂ ಆದೇಶಕ್ಕೇ ಸೆಡ್ಡು ಹೊಡೆದಿದ್ದ ನ್ಯಾ| ಕರ್ಣನ್ ಅವರು, 2016ರ ಫೆ.15ರಂದು ತನ್ನ ವರ್ಗಾವಣೆಗೆ ತಾವೇ ತಡೆಯಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದರು. ಇದರಿಂದ ಆಕ್ರೋಶಗೊಂಡ ಕೋರ್ಟ್, ನ್ಯಾ| ಕರ್ಣನ್‌ರ ಆದೇಶವನ್ನು ರದ್ದು ಮಾಡಿತ್ತು.