Advertisement

ಕುಮಾರಸ್ವಾಮಿ ಸರಕಾರದಿಂದ ನ್ಯಾಯ: ಜೆಡಿಎಸ್‌

07:40 AM Apr 15, 2018 | Team Udayavani |

ಉಡುಪಿ: ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ನ್ಯಾಯ ದೊರೆಯುತ್ತದೆ. ಅವರು ಜನಸಾಮಾನ್ಯರಿಗೂ ಸರಕಾರದ ಸೌಲಭ್ಯವನ್ನು ದೊರಕಿಸಿಕೊಡುವವರು ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಹೇಳಿದರು.

Advertisement

ಎ.12ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೆಡಿಎಸ್‌ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿಯೇ ರೈತರ ಸಾಲ ಮನ್ನಾ, ಅಂಗನವಾಡಿ ಆಶಾ ಕಾರ್ಯಕರ್ತರ ಮಾಸಿಕ ವೇತನ 10 ಸಾವಿರಕ್ಕೆ ನಿಗದಿ, ಅಂಗವಿಕಲರ ಮಾಸಾಶನ ಹೆಚ್ಚಿಸುವುದು, ಹಿರಿಯ ನಾಗರಿಕರಿಗೆ 5,000 ರೂ. ಗೌರವ ಧನ ನೀಡುವುದು, ಬಾಣಂತಿ ಮಹಿಳೆಯರಿಗೆ 6 ತಿಂಗಳ ಕಾಲ 6,000 ರೂ. ನೀಡುವುದು ಮೊದಲಾದ ಯೋಜನೆಗಳನ್ನು ಜಾರಿಗೆ ತರುವುದಾಗಿ ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ರೈತರು ಕೃಷಿ ಸಾಲದಿಂದ ತೊಂದರೆಗೊಳಗಾಗದಂತೆ ಕೂಡ ನೋಡಿಕೊಳ್ಳಲಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡಲಿದ್ದಾರೆ ಎಂದರು. 

ಜಿಲ್ಲೆಯಲ್ಲಿ ಜೆಡಿಎಸ್‌ ಪರ ಅಲೆ
ಅಧಿಕಾರ ಇಲ್ಲದಿದ್ದಾಗಲೂ ಜನಸಾಮಾನ್ಯರು, ರೈತರ ಮನೆಗಳಿಗೆ ತೆರಳಿ ಸಹಾಯ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಜೆಡಿಎಸ್‌ ಪರ ಅಲೆ ಇದೆ. ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್‌ ಖಾತೆ ತೆರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್‌ ತಲ್ಲೂರು ಅವರು ಮಾತನಾಡಿ, ರಾಜ್ಯದಲ್ಲಿ ಬಿಎಸ್‌ಪಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದೆ. ಕುಮಾರಸ್ವಾಮಿಯವರನ್ನು ಸಿಎಂ ಮಾಡಲು ಬಿಎಸ್‌ಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಜಿಲ್ಲೆಯ ಕಾರ್ಕಳದಲ್ಲಿ ಬಿಎಸ್‌ಪಿ ಸ್ಪರ್ಧಿಸಲಿದೆ. ದಲಿತ ಸಂಘರ್ಷ ಸಮಿತಿ ಕೂಡ ಬೆಂಬಲಿಸುತ್ತಿದೆ. ಕಳೆದ ಬಾರಿ 40 ಕ್ಷೇತ್ರಗಳಲ್ಲಿ 2,000 ದಿಂದ 3,000 ಮತಗಳಲ್ಲಿ ಜೆಡಿಎಸ್‌ ಸೋತಿದೆ. ಆ ಕ್ಷೇತ್ರಗಳಲ್ಲಿ ಬಿಎಸ್‌ಪಿಗೆ 5ರಿಂದ 6 ಸಾವಿರ ಮತಗಳು ಬಿದ್ದಿವೆ. ಹಾಗಾಗಿ  ಈ ಬಾರಿ ಆ ಎಲ್ಲ ಕ್ಷೇತ್ರಗಳನ್ನು ಕೂಡ ಗೆದ್ದು ಜೆಡಿಎಸ್‌ ಅಧಿಕಾರಕ್ಕೆ ಬರುವಂತೆ ಮಾಡುವುದು ನಮ್ಮ ಉದ್ದೇಶ ಎಂದರು. ಜೆಡಿಎಸ್‌ ಉಡುಪಿ ಕ್ಷೇತ್ರದ ಅಭ್ಯರ್ಥಿ ಗಂಗಾಧರ ಭಂಡಾರಿ ಬಿರ್ತಿ, ಬೈಂದೂರಿನ ಅಭ್ಯರ್ಥಿ ರವಿ ಶೆಟ್ಟಿ, ಕುಂದಾಪುರ ಅಭ್ಯರ್ಥಿ ಪ್ರಕಾಶ್‌ ಶೆಟ್ಟಿ, ಬಿಎಸ್‌ಪಿಯ ಪ್ರಶಾಂತ್‌ ತೊಟ್ಟಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next