ಬೆಂಗಳೂರು: ಯುಗದ ಕವಿ ಕುವೆಂಪು ಅವರ ಸಾಹಿತ್ಯ ಕೃಷಿಗೆ ನ್ಯಾಯಯುತ ಪ್ರಾಶಸ್ತ್ಯ ತಂದುಕೊಟ್ಟವರು ಡಾ.ದೇ.ಜವರೇಗೌಡ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು. ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ನಾಡೋಜ ಡಾ.ದೇ.ಜವರೇಗೌಡ ಜನ್ಮ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಹಿತ್ಯ ವಲಯದಲ್ಲಿ ಕುವೆಂಪು ಅವರ ಸಾಹಿತ್ಯ ಕುರಿತು ಪರ-ವಿರೋಧಗಳು ಎದುರಾದ ಸಂದರ್ಭಗಳಲ್ಲಿ ಜವರೇಗೌಡರು ಧೈರ್ಯವಾಗಿ ಎದುರಿಸಿದ್ದರು. ಅಲ್ಲದೆ, ಗಟ್ಟಿಯಾಗಿ ನಿಂತು ಕುವೆಂಪು ಅವರ ಸಾಹಿತ್ಯಕ್ಕೆ ಸಿಗಬೇಕಾದ ಗೌರವ ಸಿಗುವಂತೆ ಮಾಡಿದರು. ಯಾವುದೇ ಶಕ್ತಿಗಳಿಗೂ ಹೆದರದೇ ತಮ್ಮ ಗುರುಗಳಾದ ಕುವೆಂಪು ಅವರ ಸಾಹಿತ್ಯವನ್ನು ವಿಶ್ವಮಾನ್ಯವಾಗಿಸಿದ ಕೀರ್ತಿ ಅವರಿಗೆ ಸಲ್ಲಬೇಕು,’ ಎಂದು ಹೇಳಿದರು.
“ಜವರೇಗೌಡರು ಕನ್ನಡ ಕಾವಲು ಪಡೆಯ ದಂಡ ನಾಯಕರಾಗಿ ಕನ್ನಡದ ವಿಚಾರ ಬಂದಾಗ ಬಹಳಷ್ಟು ಗಟ್ಟಿಯಾಗಿ ನಿಂತು ಕನ್ನಡವನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ. ಕುವೆಂಪು ಅವರ ಬಗ್ಗೆ ಸಾವಿರ ಪುಟಗಳ ಗಂಗೋತ್ರಿ ಎಂಬ ಅಭಿನಂದನಾ ಗ್ರಂಥವನ್ನು ರಚಿಸಿದ್ದರು ಎಂದ ಅವರು, ಬಹಳ ಹೋರಾಟಗಳ ಫಲವಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅದನ್ನು ಉಳಿಸಿ ಬೆಳೆಸಲು ಅಳವಾಗಿ ಅಧ್ಯಯನ ಮಾಡಿರುವ ಸಂಶೋಧಕರು, ವಿದ್ವಾಂಸರು ಮುಂದೆ ಬರಬೇಕು,’ ಎಂದರು.
ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, “ದೇ.ಜವರೇಗೌಡ ಅವರು ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಕಲ್ಪನೆಯ ಕಾರಣಿಭೂತರು. ಅವರ ಸಮಗ್ರ ಸಾಹಿತ್ಯ ಗ್ರಂಥದಿಂದ ಕನ್ನಡ ನಾಡಿನ ಜಾನಪದ ಕಲೆ ಎಷ್ಟು ಶ್ರೀಮಂತವಾಗಿದೆ ಎಂಬುದು ಗೊತ್ತಾಗುತ್ತದೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದೊಳಗೆ ದೇಜವರೇಗೌಡರ ವಿಚಾರಧಾರೆಗಳನ್ನು ನೆನಪಿಸಿಕೊಳ್ಳದಿದ್ದರೆ ನಿಜವಾದ ಸ್ಮರಣೆ ಆಗದು,’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಾ.ಮನು ಬಳಿಗಾರ್, ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನಪ್ಪಮತ್ತಿತರರು ಉಪಸ್ಥಿತರಿದ್ದರು.