ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿರುವ ಧನಂಜಯ ವೈ. ಚಂದ್ರಚೂಡ್ ಅವರು ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಪ್ರಮಾಣ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ| ಚಂದ್ರಚೂಡ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಅವರ ತಂದೆಯವರಾದ ನ್ಯಾ| ವೈ.ವಿ. ಚಂದ್ರಚೂಡ್ ಅವರು ಸಿಜೆಐ ಆಗಿ ದೀರ್ಘಾವಧಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1978ರ ಫೆ.22ರಿಂದ 1985ರ ಜು.11ರ ವರೆಗೆ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ಬುಧವಾರ ಪದಗ್ರಹಣ ಮಾಡಲಿರುವ ನ್ಯಾ| ಡಿ.ವೈ.ಚಂದ್ರಚೂಡ್ ಅವರು 2024ರ ನ.10ರ ವರೆಗೆ ಅಂದರೆ 2 ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಅಯೋಧ್ಯೆ ವಿವಾದ, ಖಾಸಗಿತನದ ಹಕ್ಕು ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿರುವ ಹೆಗ್ಗಳಿಕೆಯೂ ನ್ಯಾ| ಚಂದ್ರಚೂಡ್ ಅವರಿಗೆ ಸಲ್ಲುತ್ತದೆ.
ನ್ಯಾ| ಲಲಿತ್ ನಿವೃತ್ತಿ: ಸಿಜೆಐ ಯು.ಯು. ಲಲಿತ್ ಅವರ 74 ದಿನಗಳ ಸೇವಾವಧಿಯು ಮಂಗಳವಾರ ಪೂರ್ಣಗೊಂಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವಾರು ಸುಧಾರಣ ಕ್ರಮಗಳನ್ನು ಜಾರಿ ಮಾಡಿದ ಖ್ಯಾತಿಯೊಂದಿಗೆ ಅವರು ಮಂಗಳವಾರ ನಿವೃತ್ತಿಯಾಗಿದ್ದಾರೆ.