ಗೌರಿಬಿದನೂರು: ಕಾಟಾಚಾರದ ವಿಶ್ವ ಪರಿಸರ ದಿನಾಚರಣೆ ಮಾಡುವುದನ್ನು ಬಿಟ್ಟು ಮರಗಿಡ, ಪರಿಸರ, ನೀರು, ಗೋಕುಂಟೆ, ನದಿ ಉಳಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಾಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ ಮಾತನಾಡಿ, ಹಲವು ಬಾರಿ ಪ್ರತಿಭಟನೆ, ಧರಣಿ ನಡೆಸಿದ್ದರೂ ಸಹ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳದೇ ಪ್ರತಿವರ್ಷ ಪರಿಸರ ದಿನಾಚರಣೆ ಕಾಟಾಚಾರಕ್ಕೆ ಮಾಡುತ್ತಿದೆ ಎಂದು ದೂರಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಅರ್.ಲಕ್ಷ್ಮಿನಾರಾಯಣ್ ಮಾತನಾಡಿ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಾಮೂಹಿಕ ನಾಯಕತ್ವದ ಮೂಲಕ ಕಾಟಾಚಾರದ ವಿಶ್ವ ಪರಿಸರ ದಿನಾಚರಣೆಯನ್ನು ಖಂಡಿಸುತ್ತದೆ. ತಾಲೂಕಿನ ನಾಮಗೊಂಡ್ಲು ಗ್ರಾಮದ ಗೋಕುಂಟೆ ಮತ್ತು ಅದಕ್ಕೆ ಲಗತ್ತಾದ ತರುಮರಿ, ಗೋಕಾಡು ಉಳಿಸಲು ಸಾಧ್ಯವಾಗಿಲ್ಲ.
ಅದರಲ್ಲಿ ಕಟ್ಟಡ ಕಟ್ಟಲು ತಾಲೂಕು ಆಡಳಿತ ಮುಂದಾಗಿದೆ. ಉತ್ತರ ಪಿನಾಕಿನಿ ನದಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಿ ನದಿ ರಕ್ಷಿಸಲು ವಿಫಲವಾಗಿದೆ. ನದಿ ದಡದಲ್ಲಿ ಶಾಸಕರಿಂದ ಬಿದಿರಿನ ಸಸಿ ನೆಡುವ ಆಚರಣೆ ತೋರಿಕೆಗಾಗಿ ಮಾಡುತ್ತಿದ್ದಾರೆ. ಪಿನಾಕಿನಿ ಪಾತ್ರದಲ್ಲಿ ಕುರುಬರಹಳ್ಳಿ ಬಳಿ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟವರ ವಿರುದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಹಾತ್ಮರ ಹೆಸರಿನಲ್ಲಿ ಕೆರೆ ಗೋಕುಂಟೆಗಳನ್ನು ಆಕ್ರಮಿಸಿಕೊಂಡು ಭವನಗಳನ್ನು ನಿರ್ಮಿಸುವುದನ್ನು ನಿಲ್ಲಿಸಬೇಕು. ಭವನಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶ್ವತ್ಥ್ಗೌಡ, ಆದಿನಾರಾಯಣಪ್ಪ, ನರಸಿಂಹರೆಡ್ಡಿ ಜಯಣ್ಣ, ವೆಂಕಟೇಶ್, ಸನತ್‌ಕುಮಾರ್ ಇದ್ದರು.