Advertisement

ಕೇವಲ ಮೂರು ವರ್ಷಗಳ ಬದುಕು!

08:50 PM Apr 11, 2019 | mahesh |

ಕಾಲೇಜು ಶುರುವಾಗಿತ್ತು. ಆಗಲೇ ಮಳೆಗಾಲವೂ ಶುರುವಾಗಿತ್ತು. ಕಾಲೇಜು ಮತ್ತು ಮಳೆಗಾಲ ಜೊತೆಯಾಗಿ ಆರಂಭವಾಗಬೇಕೆ! ಒಂದೆಡೆ ಕಾಲೇಜು ಸೇರುವ ಖುಷಿ. ಮತ್ತೂಂದೆಡೆ ಜಗವೆಲ್ಲ ತಂಪಾಗಿದೆ ಎಂಬಂಥ ಪುಳಕ. ಮನಸ್ಸೆಲ್ಲ ನವಿರು ನವಿರು. ಜೊತೆಗೆ, ಪಿಯುಸಿ ಮುಗಿಸಿ ಡಿಗ್ರಿಗೆ ಬಂದಿದ್ದೇನೆ ಎಂಬ ಹೆಮ್ಮೆ. ಮೊದಲನೆಯ ದಿನ ಕ್ಲಾಸಿಗೆ ಎಂಟ್ರಿ ಕೊಟ್ಟಾಗ ಗುರುತು-ಪರಿಚಯದ ಇಲ್ಲದ ಮುಖಗಳೇ ಇದ್ದವು. ಯಾರಲ್ಲಿ ಹೇಗೆ ಮಾತನಾಡುವುದು ಎಂಬಂಥ ಅಂಜಿಕೆ. ಮೊದಲ ಕ್ಲಾಸ್‌ ಎಂದರೆ ಒಂದು ರೀತಿಯ ಹಿಂಜರಿಕೆ. ಲೆಕ್ಚರರ್‌ ಬಂದು ಹೆಸರು ಕರೆದು ಹಾಜರಾತಿ ಕರೆದಾಗ ಎಸ್‌ ಸರ್‌, ಎಸ್‌ ಮೇಡಂ ಎಂದು ಹೇಳುವಾಗ ಉಡುಗುವ ದನಿ. ಆದರೂ ಆ ದಿನ ಮುಗಿಯುವುದರೊಳಗೆ ಒಬ್ಬರು ಫೇವರಿಟ್‌ ಲೆಕ್ಟರರ್‌ ಸಿಕ್ಕಿರುತ್ತಾರೆ. ಇವರೇ ನಮ್ಮ ಇಷ್ಟದ ಮೇಷ್ಟ್ರು ಎಂದು ನಿರ್ಧರಿಸಿಬಿಟ್ಟಿರುತ್ತೇವೆ. ಆ ನಂಬಿಕೆ ಕಾಲೇಜು ಮುಗಿಯುವವರೆಗೂ ಉಳಿದುಕೊಂಡಿರುತ್ತದೆ.

Advertisement

ಕಾಲ ಎಷ್ಟೊಂದು ವೇಗವಾಗಿ ಓಡುತ್ತದೆ. ಪಾಠಗಳನ್ನು ಓದಬೇಕು. ದಿನಚರಿಯನ್ನು ಪಾಲಿಸಬೇಕು. ಇದರ ಜೊತೆಗೆ ಒಂದಷ್ಟು ಪಠ್ಯೇತರ ಚಟುವಟಿಕೆಗಳಿರುತ್ತವೆ. ಮತ್ತೂಂದಿಷ್ಟು ತೊಡಕುಗಳು ಬಾಧಿಸುತ್ತವೆ. ಇಂಥ ಸಂದರ್ಭಗಳಲ್ಲಿ ಸೀನಿಯರ್‌ಗಳು ನೆರವಿಗೆ ಬರುತ್ತಾರೆ. ಮೊದಮೊದಲು ಸೀನಿಯರ್ಸ್‌ ಎಂದರೆ ತುಂಬ ಭಯ. ಎಷ್ಟಾದರೂ ಅವರು ನಮ್ಮಿಂದ ಹಿರಿಯರು ಅಲ್ಲವೆ?

ಆರಂಭದ ದಿನಗಳಲ್ಲಿ ಅವರಿಗೆ ತುಂಬ ಗೌರವ ಕೊಡುತ್ತಿರುತ್ತೇವೆ. ಆದರೆ, ನಿಧಾನವಾಗಿ ಅಣ್ಣ-ಅಕ್ಕ ಎಂದು ಸಂಬೋಧಿಸಲಾರಂಭಿಸುತ್ತೇವೆ. ಅವರ ಹೆಸರೂ ಮರೆತುಹೋಗಿರುತ್ತದೆ. ಅಣ್ಣ-ಅಕ್ಕ ಎಂದೇ ವಾಡಿಕೆಯಾಗಿರುತ್ತದೆ. ಅದರಲ್ಲೂ ಕೆಲವರು ಮಾತ್ರ ತುಂಬ ಹತ್ತಿರವಾಗಿರುತ್ತಾರೆ. ಇನ್ನು ಕೆಲವರು “ಹಲೊ’ ಎಂಬುದಕ್ಕೆ ಮಾತ್ರ ಸೀಮಿತರಾಗಿರುತ್ತಾರೆ. ಕೆಲವರನ್ನು ನೋಡುವುದೇ ಕಾಲೇಜಿನ ಮುಕ್ತಾಯದ ದಿನಗಳಲ್ಲಿ. ಅದೂ ಬೀಳ್ಕೊಡುಗೆಯ ಸಂದ‌ರ್ಭದಲ್ಲಿ.

ಪದವಿಯ ಪರೀಕ್ಷೆಯ ಬಗ್ಗೆ ಏನೊಂದೂ ಗೊತ್ತಿರುವುದಿಲ್ಲ. ಒಂದೆರಡು ದಿನ ಕಳೆಯುವಷ್ಟರಲ್ಲಿ ಇಂಟರ್ನಲ್ಸ್‌ ಬಂದುಬಿಡುತ್ತದೆ. ಅದರಲ್ಲಿ ಏನೋ ಒಂದಿಷ್ಟು ಬರೆದು ಬರುತ್ತೇವೆ. ಮೊದಲನೆಯ ಪರೀಕ್ಷೆ ಎಂದು ಕ್ಷಮೆ ಇರುತ್ತದೆ. ಲೆಕ್ಚರರ್ ಗ್ರೇಸ್‌ ಮಾರ್ಕ್‌ ಕೊಡುತ್ತಾರೆ. ಫೇಲಾದ್ರೂ ಅಡ್ಡಿ ಇಲ್ಲ, ಮುಂದೆ ಚೆನ್ನಾಗಿ ಮಾಡೋಣ ಎಂಬ ಭಾವವಿರುತ್ತದೆ.

ವರ್ಷದ ಮೊದಲ ಭಾಗದಲ್ಲಿ ತುಂಬ ನಿಷ್ಠೆಯಿಂದ ಇರುತ್ತೇವೆ. ಬೆಲ್‌ ಆದರೂ ತರಗತಿಯಿಂದ ಏಳುವುದಿಲ್ಲ. ಲೆಕ್ಚರರ್‌ ಬರುವ ಮೊದಲೇ ತರಗತಿಯಲ್ಲಿ ಹಾಜರಿರುತ್ತೇವೆ. ಮೊದಲ ಸೆಮಿಸ್ಟರ್‌ ಆದ ಬಳಿಕ ಒಂದು ರೀತಿಯ ಸಲುಗೆ ಬಂದು ಬಿಡುತ್ತದೆ, ನಿಧಾನವಾಗಿ ಕ್ಲಾಸ್‌ ಬಂಕ್‌ ಮಾಡಲಾರಂಭಿಸುತ್ತೇವೆ.

Advertisement

ಮೊದಲಬಾರಿ ತರಗತಿಗೆ ಬಂಕ್‌ ಹೊಡೆದಾಗ ಎಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬಂಥ ಭಯವಿರುತ್ತದೆ. ಕಾರಿಡಾರ್‌ಗಳಲ್ಲಿ ತಿರುಗಾಡಲಾಂಭಿಸುತ್ತೇವೆ. ಗಾಸಿಪ್‌ಗ್ಳಿಗೆ ಆಹಾರವಾಗುತ್ತೇವೆ. ಕ್ಯಾಂಟೀನ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತೇವೆ. ಗೆಳೆಯರಿಗೆ, ಲೆಕ್ಚರರ್‌ಗೆ ಒಂದೊಂದು ನಿಕ್‌ನೇಮ್‌ ಇಟ್ಟುಕೊಳ್ಳುತ್ತೇವೆ. ಕಾಲಚಕ್ರ ವೇಗವಾಗಿ ಉರುಳುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ಫ‌ರ್ಸ್ಡ್ ಇಯರ್‌ ಮುಗಿದುಬಿಡುತ್ತದೆ.

ಇನ್ನೂ ಎರಡು ವರ್ಷ ಇದೆಯಲ್ಲ ಎಂಬ ಯೋಚನೆ ಮನಸ್ಸಿನಲ್ಲಿ ಕುಳಿತುಬಿಡುತ್ತದೆ. ರಜೆ ಮುಗಿಯುತ್ತದೆ. ಮುಂದಿನ ತರಗತಿ ಆರಂಭವಾಗುತ್ತದೆ. ಎರಡನೆಯ ವರ್ಷದಲ್ಲಿ ನಾವು ಕೂಡ ಸೀನಿಯರ್‌ ಆದೆವು ಎಂಬ ಕೊಬ್ಬು ಬಂದುಬಿಡುತ್ತದೆ. ಸ್ವಲ್ಪ ಧೈರ್ಯವೂ ಅಧಿಕವಿರುತ್ತದೆ. ಹೊಸದಾಗಿ ಕೆಲವರ ಪರಿಚಯವೂ ಆಗಿರುತ್ತದೆ. ಕೆಲವರಿಗೆ ಕೆಲವರ ಮೇಲೆ ಪ್ರೀತಿ ಉಂಟಾಗಿರುತ್ತದೆ. ಆಮೇಲೆ ಬ್ರೇಕ್‌ಅಪ್‌ ಆಗಿಬಿಡುತ್ತದೆ. ಸೋಶಿಯಲ್‌ ಮೀಡಿಯಾಗಳಲ್ಲಿ ವಿಷಯಗಳು ಓಡಾಡಲಾರಂಭಿಸುತ್ತವೆ.

ಇಂಥ ಸಂದರ್ಭದಲ್ಲಿ ಹಳೆಯ ಫಿಲ್ಮ್ ಸಾಂಗ್‌ಗಳು ಇಷ್ಟವಾಗುತ್ತವೆ. ಅವೆೆಲ್ಲದರ ನಡುವೆ ನಮ್ಮ ಬರ್ತ್‌ಡೇ ಬಂದು ಬಿಡುತ್ತದೆ. ಪದವಿಯ ಬದುಕಿನಲ್ಲಿ ಹುಟ್ಟಿದ ಹಬ್ಬ ಅಂದ್ರೆ ತುಂಬಾ ವಿಶೇಷ. ಮಧ್ಯರಾತ್ರಿ 12 ಗಂಟೆಗೆ “ವಿಶ್‌’ ಶುರುವಾದರೆ, ಮರುದಿನ 12 ಗಂಟೆಯವರೆಗೆ ಇರುತ್ತೆ. ಒಂದು ದಿನದ ಮಟ್ಟಿಗೆ ನಾವು ಸೆಲೆಬ್ರಿಟಿಗಳಾಗಿ ಬಿಡುತ್ತೇವೆ. ಕಾರಿಡಾರ್‌ನಲ್ಲಿ ಹೋಗುವಾಗ ಅಲ್ಲಿಯವರೆಗೆ ಗುರುತು ಪರಿಚಯವಿಲ್ಲದವರೂ ಕೂಡ ವಿಶ್‌ ಮಾಡುತ್ತಾರೆ. ಸೆಲೆಬ್ರಿಟಿ ಅನ್ನೋ ಫೀಲಿಂಗ್‌ ನಮ್ಮ ತಲೆ ಹತ್ತಿದರೆ ನಮ್ಮ ಜಂಗಮವಾಣಿ ಹ್ಯಾಂಗ್‌ ಆಗಿ ಅದನ್ನು ಇಳಿಸಿ ಬಿಡುವ ಕೆಲಸ ಮಾಡುತ್ತದೆ. ಸೆಕೆಂಡ್‌ ಇಯರ್‌ ಕೂಡ ಮುಗಿಯುತ್ತ ಬರುತ್ತದೆ. ಆ ದಿನ ಸಭಾ ಕಾರ್ಯಕ್ರಮದಲ್ಲಿ ಇರುವುದಕ್ಕಿಂತ ಹೆಚ್ಚು ಪೋಟೋಶೂಟ್‌ಗಳಲ್ಲೇ ಎಲ್ಲಾ ಬ್ಯುಸಿಯಾಗಿರುತ್ತಾರೆ.

ನಾಲ್ಕನೇ ಸೆಮಿಸ್ಟರ್‌ ಕೂಡ ಮುಗಿಯುತ್ತ ಬರುತ್ತದೆ. ಇನ್ನೇನು ಕಾಲೇಜು ಹತ್ತು ದಿನದಲ್ಲಿ ಮುಗಿಯುತ್ತದೆ ಎನ್ನುವಾಗ ಸೀನಿಯರ್ ಗಳೆಲ್ಲ ತುಂಬಾ ಹತ್ತಿರವಾಗಿ ಬಿಡುತ್ತಾರೆ. ಬಿಟ್ಟು ಹೋಗ್ತಾ ಇದ್ದಾರೆ ಅಂತ ಬೇಜಾರಾಗೋಕೆ ಶುರುವಾಗುತ್ತದೆ. ಅದೇ ಸಮಯದಲ್ಲಿ ಅವರಿಗಾಗಿ ಫೇರ್‌ವೆಲ್‌ ಕಾರ್ಯಕ್ರಮ. ಅವರು ಕಾಲೇಜಿನಲ್ಲಿ ಕಳೆದ ದಿನಗಳ ಬಗ್ಗೆ ಹೇಳುವಾಗ ಕಣ್ಣಂಚಿನಲ್ಲಿ ನೀರು “ನಾನು ಈಗ ಹೊರಬರಲೇ?’ ಎಂದು ಕೇಳುತ್ತಿರುತ್ತೆ. ಜಾಲಿಡೇಸ್‌ ಹಾಗೂ ಕಿರಿಕ್‌ ಪಾರ್ಟಿಯ ಹಾಡುಗಳು ಕಣ್ಣೀರನ್ನು ಇಳಿಸಿಯೇ ಬಿಡುತ್ತವೆ. ಸೀನಿಯರ್ ಹೋಗ್ತಿದ್ದಾರೆ ಅನ್ನೋ ಬೇಜಾರಿನ ಜೊತೆ ಇನ್ನು ನಾವು ಸೀನಿಯರ್ ಅನ್ನೋ ಖುಷಿಯೂ ಇದೆ. ಮುಂದೆ ತಮ್ಮ ಉನ್ನತ ಶಿಕ್ಷಣಕ್ಕೆ ಅಥವಾ ಉದ್ಯೋಗಕ್ಕೆ ತೆರಳುವ ಎಲ್ಲಾ ಸಿನಿಯರ್ಗಳಿಗೂ ಆಲ್‌ ದ ಬೆಸ್ಟ್‌ !

ಜಯಶ್ರೀ ಆರ್ಯಾಪು
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next