ಪ್ರತಿಕ್ರಿಯೆ: “ಗುಳ್ಟು’ಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ಚಿತ್ರ ನೋಡಿದವರೆಲ್ಲರೂ ಸ್ವತಃ ಅವರುಗಳೇ ಸಾಮಾಜಿಕ ತಾಣಗಳಲ್ಲಿ ಚಿತ್ರದ ಫೋಟೋ ಟ್ಯಾಗ್ ಮಾಡಿ, ಒಳ್ಳೆಯ ಮಾತು ಬರೆಯುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಗೊತ್ತಿರದ ಅದೆಷ್ಟೋ ಮಂದಿ ಫೋನ್ ಮಾಡಿ ಶುಭಾಶಯ ಹೇಳುತ್ತಿದ್ದಾರೆ. ಬುಕ್ ಮೈ ಶೋನಲ್ಲಿ ಶೇ.90 ರಷ್ಟು ಫುಲ್ ಆಗಿದೆ. ಸಿನಿಮಾದಲ್ಲಿರುವ ವಿಷಯ, ತಂತ್ರಜ್ಞಾನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗಳಿಕೆ: ಸಿನಿಮಾದ ಗಳಿಕೆ ತೀರಾ ಕಡಿಮೆ ಇದೆ. ಶುಕ್ರವಾರದ ಮೊದಲ ಪ್ರದರ್ಶನದ ಗಳಿಕೆ ಕಳಪೆಯಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ಉತ್ತಮ ಗಳಿಕೆಯತ್ತ ಪ್ರದರ್ಶನ ಕಂಡಿತು. ಶನಿವಾರ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಭಾನುವಾರ ಕೂಡ ಅದೇ ತುಂಬು ಪ್ರದರ್ಶನವಿತ್ತು. ಭಾನುವಾರ ಹತ್ತು ಪ್ರದರ್ಶನಗಳು ಹೆಚ್ಚಾಗಿವೆ. ಸಾಮಾನ್ಯವಾಗಿ ಸೋಮವಾರದ ಪ್ರದರ್ಶನ ಹೆಚ್ಚಾಗಿರುವುದಿಲ್ಲ. ಆದರೆ, “ಗುಳ್ಟು’ ಮೂರು ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಬಹುತೇಕ ಸ್ಟುಡೆಂಟ್ಸ್ ತುಂಬಿಕೊಂಡಿದ್ದಾರೆ.
ಚಿತ್ರರಂಗದ ಬೆಂಬಲ: ನಿಜ ಹೇಳುವುದಾದರೆ, ನಮ್ಮದು ಹೊಸ ತಂಡ. ಚಿತ್ರರಂಗದಿಂದ ಉತ್ತಮ ಸಹಕಾರ ಸಿಕ್ಕಿದೆ. ಇಲ್ಲಿಯತನಕ ಹೊಸಬರಿಗೆ ಎಷ್ಟರಮಟ್ಟಿಗೆ ಬೆಂಬಲ ಸಿಕ್ಕಿದೆಯೋ ಗೊತ್ತಿಲ್ಲ. ಆದರೆ, ನಮಗೆ ಮಾತ್ರ ಚಿತ್ರರಂಗದಿಂದ ಒಳ್ಳೆಯ ಬೆಂಬಲ ಸಿಕ್ಕಿದೆ. ಯೋಗರಾಜಭಟ್, ರಕ್ಷಿತ್ ಶೆಟ್ಟಿ, ಹೇಮಂತ್‌ಕುಮಾರ್, ಪವನ್‌ಕುಮಾರ್ ಸೇರಿದಂತೆ ಹಲವರು ಒಳ್ಳೆಯ ಕಂಟೆಂಟ್ ಇರುವ ಸಿನಿಮಾವನ್ನು ಎಲ್ಲಾ ಕಡೆ ತಲುಪಿಸುವ ಕೆಲಸ ಮಾಡಿ ಅಂತ ಅವರೇ ಮುಖಪುಟ, ವಾಟ್ಸಾಪ್ ಇತರೆ ತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ರಾಜ್.ಬಿ.ಶೆಟ್ಟಿ ತಮ್ಮ ಹದಿನೈದು ಜನರ ತಂಡ ಕಟ್ಟಕೊಂಡು ಮಂಗಳೂರು ಸುತ್ತಮುತ್ತ ಪ್ರಚಾರ ಮಾಡುತ್ತಿದ್ದಾರೆ. ಇನ್ನೂ, ಎಷ್ಟೋ ಮಂದಿ ಚಿತ್ರೀಕರಣದ ಸೆಟ್‌ನಿಂದಲೇ ಶುಭಾಶಯ ಕೋರುತ್ತಿದ್ದಾರೆ.
ಪ್ರಚಾರ ಕೊರತೆ: ಇದು ನಮ್ಮ ಮೊದಲ ಚಿತ್ರ. ಎಲ್ಲರಿಗೂ ಹೊಸದು. ಇರುವ ಬಜೆಟ್‌ನಲ್ಲಿ ಕೈಲಾದಷ್ಟು ಪ್ರಚಾರ ಮಾಡಿದ್ದೇವೆ. ಸಿನಿಮಾ ಶುರುಮಾಡಿ, ಮುಗಿಸುವ ಹೊತ್ತಿಗೆ ಸಾಕಾಗಿ ಹೋಗಿದ್ದೆವು. ಪ್ರಚಾರಕ್ಕೆ ಏನೆಲ್ಲಾ ಮಾಡಬೇಕೋ ಅಷ್ಟು ಮಾಡಿದ್ದೇವೆ. ಆದರೆ, ಅದು ಇಂತಹ ಚಿತ್ರಕ್ಕೆ ಸಾಕಾಗಿಲ್ಲ. ಚಿತ್ರಮಂದಿರ ಬಾಡಿಗೆ ಲೆಕ್ಕ ಹಾಕಿರಲಿಲ್ಲ. ಅದಕ್ಕೆ ಹಣ ಹಾಕಿದ್ದರಿಂದ ಪ್ರಚಾರಕ್ಕೆ ಹಣ ಇಲ್ಲದಂತಾಯ್ತು. ಆದರೆ, ಜನರ ಬಾಯಿ ಮಾತಿನ ಪ್ರಚಾರವೇ ಇಂದು ಚಿತ್ರ ಪ್ರದರ್ಶನ ಫುಲ್ ಆಗಲು ಕಾರಣ. ಬುಕ್ ಮೈ ಶೋನಲ್ಲಿ ಸುಮಾರು 250 ವಿಮರ್ಶೆಗಳು ಬಂದಿವೆ. ಎಲ್ಲವೂ ಪಾಸಿಟಿವ್ ಆಗಿವೆ. ಎಲ್ಲೆಡೆಯೂ ಫೈವ್ ಸ್ಟಾರ್ ನೀಡಲಾಗಿದೆ. ಪ್ರತಿಯೊಬ್ಬ ಸಿನಿ ಪ್ರೇಮಿ ತಮ್ಮ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿ ಪ್ರೋತ್ಸಾಹಿಸುತ್ತಿದ್ದಾರೆ.
3 ವರ್ಷದ ಶ್ರಮ: “ಗುಳ್ಟು’ ಚಿತ್ರವನ್ನು ಕಳೆದ 2015 ರ ಶುರು ಮಾಡಿದ್ದು. ಅದು ಮುಗಿಯುವ ಹೊತ್ತಿಗೆ ಮೂರು ವರ್ಷಗಳಾಗಿವೆ. ಈ ಮೂರು ವರ್ಷಗಳ ಹಿಂದಿನ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕ ಖುಷಿ ನಮ್ಮದು. ಆದರೆ, ಕಮರ್ಷಿಯಲ್ ಆಗಿ ಸಿಗಬೇಕಿದೆಯಷ್ಟೇ.
ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ: ನಿಜವಾಗಲೂ ಮಾಧ್ಯಮಗಳಿಂದ ಈ ಮಟ್ಟದ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಆದರೆ, ಸಿನಿಮಾದಲ್ಲಿ ಉತ್ತಮ ಸಂದೇಶವಿತ್ತು. ಒಳ್ಳೆಯ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದರಿಂದ ಎಲ್ಲೋ ಒಂದು ಕಡೆ ಭರವಸೆ ಇತ್ತು. ಆ ಕಾರಣದಿಂದ ಹಾರ್ಡ್‌ವರ್ಕ್ ಮಾಡಿದ್ವಿ. ಆ ಭರವಸೆ ಸುಳ್ಳಾಗಲಿಲ್ಲ.
ಒಟ್ಟು ಬಜೆಟ್: ಚಿತ್ರದ ಒಟ್ಟಾರೆ ಬಜೆಟ್ 2.10 ಕೋಟಿ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆಯಾದರೂ, ಕಲೆಕ್ಷನ್ ಜೋರಾಗಬೇಕು. ಆಗಷ್ಟೇ ನಮ್ಮ ಚಿತ್ರಕ್ಕೆ ಹಾಕಿದ ಹಣ ಹಿಂದಿರುಗಲು ಸಾಧ್ಯ. ಇಲ್ಲವೆಂದರೆ, ಎಷ್ಟೇ ಒಳ್ಳೆಯ ಮಾತು ಕೇಳಿಬಂದರೂ ಕಮರ್ಷಿಯಲ್ ವಕೌìಟ್ ಆಗಿಲ್ಲವೆಂದರೆ ಅರ್ಥ ಇರುವುದಿಲ್ಲ.
ಚಿತ್ರಮಂದಿರ ಹೆಚ್ಚಳ: ಭಾನುವಾರದ ಪ್ರದರ್ಶನಗಳು ಹೆಚ್ಚಾಗಿವೆ. ಆರು ಸಿಂಗಲ್ ಥಿಯೇಟರ್‌ನಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ 40 ಶೋ ಇದೆ. ಇಲ್ಲಿರುವ ಸಮಸ್ಯೆಯೆಂದರೆ, ಒಳ್ಳೆಯ ಚಿತ್ರಗಳಿಗೆ ಚಿತ್ರಮಂದಿರ ಸಿಗಲ್ಲ. ಬಾಡಿಗೆ ಕಟ್ಟಲು ಸಣ್ಣ ನಿರ್ಮಾಪಕರಿಗೆ ಆಗಲ್ಲ. ಹೇಗೋ ಹೊಂದಿಸಿಕೊಂಡು ಹೋದರೂ, ಥಿಯೇಟರ್ ಸಿಗುವುದು ಕಷ್ಟ. ಕೆಲವು ಕಡೆ ಬಾಡಿಗೆ ಕಟ್ಟಲು ಸಿದ್ಧರಿದ್ದರೂ, ಚಿತ್ರಮಂದಿರ ಸಿಕ್ಕಿಲ್ಲ. ಆದರೂ, ಈಗ ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿಬರುತ್ತಿರುವುದರಿಂದ ಮುಂದಿನ ವಾರದಿಂದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಲಿದೆ. ಇಷ್ಟರಲ್ಲೇ ಸೆಲೆಬ್ರಿಟಿ ಶೋ ಮಾಡಿ ಆ ಮೂಲಕ ಇನ್ನಷ್ಟು ಪ್ರಚಾರ ಮಾಡುವ ಯೋಚನೆ ಇದೆ.