Advertisement

ಸುಮ್ಮನೆ ಹೀಗೊಂದು ಕನವರಿಕೆ

04:49 PM Oct 20, 2017 | |

ಪಾರ್ಲರಿಗೆ ಹೋಗಿ ಫೇಶಿಯಲ್‌, ವ್ಯಾಕ್ಸಿಂಗ್‌ ಇತ್ಯಾದಿ ಮುಗಿಸಿಕೊಂಡು ಬಂದು, ಹಳದಿ ಶಾಸ್ತ್ರ ಇತ್ಯಾದಿ ನಡೆದು, ಎರಡು ಕೈಗಳಿಗೂ ಮೆಹೆಂದಿ, ಹಸಿರು ಗಾಜಿನ ಬಳೆತೊಟ್ಟು  ನಾಳಿನ ಮದುವೆಯ ಕನಸಿನಲ್ಲಿ ಮುಳುಗಿರುವ ಮದುವಣಗಿತ್ತಿ ನಾನು.

Advertisement

ಮೊಬೈಲ್‌ ರಿಂಗಣಿಸುತ್ತಲೇ ಅವನ ಕರೆಯೆಂದು ಕಾಡಿಸುವ ಗೆಳತಿಯರು, ಅವನ ಮೇಸೇಜು ನೋಡಿ ನನ್ನ ಮುಖದಲ್ಲಿ ಮೂಡಿದ ಮುಗುಳ್ನಗೆಯನ್ನು ಗಮನಿಸಿ, ಬ್ಲಿಷಿಗ್‌ ಎಂದು ಇಷ್ಟು ದಿನ ಕಾಡುತ್ತಿದ್ದ ಗೆಳತಿಯರಿಂದ ದೂರಹೋಗಬೇಕೆನ್ನುವ ಅಳುಕು. ಅವನು ನನ್ನ ಹುಟ್ಟುಹಬ್ಬದ ದಿನ ನನಗಾಗಿ ಸರ್‌ಪ್ರೈಸಾಗಿ ಹೂವಿನ ಬೊಕ್ಕೆ, ಡ್ರೆಸ್ಸನ್ನು ಕಳುಹಿಸಿದಾಗ “ತುಂಬಾ ಲಕ್ಕಿ ಕಣೇ ನೀನು, ಮುಂದಿನ ಹುಟ್ಟುಹಬ್ಬಕ್ಕೆ ಏನೇನೂ ಗಿಫ್ಟನ್ನು ಕೊಡ್ತಾನೋ’ ಎಂದು ಆಕಾಶಕ್ಕೆ ಏರಿಸಿದ್ದಳು ಪ್ರಾಣ ಸ್ನೇಹಿತೆ ಗೀತಾ.

ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿ ವರುಷ ಕಳೆದಿಲ್ಲ, ಮದುವೆ ನಿಶ್ಚಯವಾಗಿಯೇ ಬಿಟ್ಟಿತು. ಶಾಲೆ, ಕಾಲೇಜು, ಕೆಲಸವೆಂದೆಲ್ಲ ಅಲೆದು, ಮನೆಯಲ್ಲಿ ಅಡುಗೆ ಕಲಿಯಲು ಸಮಯವೇ ಆಗಲಿಲ್ಲ, ಇನ್ನೂ ಮದುವೆ ನಿಶ್ಚಯವಾದೊಡನೆ ಕಲಿಯೋಣವೆಂದರೆ, ಜಾಸ್ತಿ ಸಮಯವೇ ಇರಲಿಲ್ಲ. ಗೆಳತಿಯರೆಲ್ಲ “ಹೆದರಬೇಡವೇ, ಯೂಟ್ಯೂಬ್‌ನಲ್ಲಿ ಬೇಕಾದಷ್ಟು ರೆಸಿಪಿ ಸಿಗುತ್ತೆ ಬಿಡೆ’ ಎಂದು ಧೈರ್ಯ ತುಂಬಿದರು. ಮತ್ತೂಬ್ಬಳು, “ಅವನಿಗೆ ಅಡಿಗೆ ಬರುತ್ತಾ ಕೇಳೇ’ ಎಂದಳು. ಇನ್ನೊಬ್ಬಳು, “ಮ್ಯಾಗಿ ಮಾಡಿದರೆ ಆಯ್ತು ಬಿಡೆ’ ಎಂದಳು!

ಕೆಲಸಕ್ಕೆ ರಾಜೀನಾಮೆ ಕೊಟ್ಟರೆ ಊರವರೆಲ್ಲ ಕೇಳಲು ಶುರುಮಾಡಿದರು. “ನನ್ನ ಕಂಪೆನಿ ಅವರ ಊರಿನಲ್ಲಿ ಇಲ್ಲ’ ಎಂದರೂ ಕೇಳದೇ, “ಅಲ್ಲಿ ಹೋಗಿ ಹುಡುಕುತ್ತಿಯಾ, ಈಗಲೇ ಹುಡುಕಲು ಶುರುಮಾಡಿದ್ದಿಯಾ’, ಎಂದೆಲ್ಲಾ ಕೇಳಲು ಶುರುಮಾಡಿದರು. ಅದಕ್ಕೆ ಈಗ ಯಾರು ಕೇಳಿದರೂ, “ಈಗಾಗಲೇ ಹುಡುಕಿದ್ದೇನೆ’ ಎಂದು ಹೇಳಲು ಶುರುಮಾಡಿದ್ದೇನೆ.

ಸೀರೆ ಉಡುವ ಅಆಇಈ ಕೂಡ ಗೊತ್ತಿಲ್ಲ. ಇನ್ನೂ ಬಂಗಾರ, ಕ್ರೀಮು, ಪೌಡರ್‌ ಇತ್ಯಾದಿ ಸೌಂದರ್ಯವರ್ಧಕದ ಗಂಧಗಾಳಿಯಿಲ್ಲ. ಮದುವೆಯಾದವರು ಹೀಗಿರಬೇಕು ಎಂದೆಲ್ಲ ಜನರು ಹೇಳುವಾಗ ನಾನು ಹೇಗೆ ನಿಭಾಯಿಸಬಲ್ಲೆ ಎಂಬ ಪ್ರಶ್ನೆ ನನ್ನ ಮನದಲ್ಲಿ.

Advertisement

ಕಚೇರಿಯ ನೊಟೀಸು ಪೀರಿಯೆಡ್ಡು ಮುಗಿದು ನನಗಾಗಿ ಉಳಿದದ್ದು, ಹದಿನೈದು ದಿನ. ಆ ಹದಿನೈದು ದಿನದಲ್ಲಿ ಅಮ್ಮನೊಂದಿಗೆ ಸೀರೆ, ಬಂಗಾರ ಇತ್ಯಾದಿ ಶಾಪಿಂಗ್‌ ಮುಗಿಸಿ, ಸೀರೆಗೆ ಫಾಲು, ಗೊಂಡೆ, ರವಿಕೆ ಹೊಲಿಸಲು ಓಡಾಡುವುದರಲ್ಲಿ, ದರ್ಜಿಯ “ಯಾವ ನೆಕ್‌ಲೇಸ್‌’ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಸುಸ್ತಾಗಿ ಹೋದೆ. “ನಮ್ಮ ಮನೆಗೆ ಚಹಾ ಕುಡಿಯಲು ಬಾರೆ’ ಎಂದು ಪಕ್ಕದ ಮನೆಯ ಲೀಲಾ ಆಂಟಿ ಕರೆದದ್ದೇ ತಡ, ನೆರೆಯವರೆಲ್ಲ “ನಮ್ಮ ಮನೆಗೆ ಊಟಕ್ಕೆ , ಚಹಾಕ್ಕೆ ಬಾರೆ’ ಎಂದು ಕರೆದು, ಅಪಾಯಿಂಟ್‌ಮೆಂಟ್‌ ಕೊಡಲು ನನ್ನ ತಂಗಿಯನ್ನು ಪಿ.ಎ. ಮಾಡಿಕೊಂಡೆ.

ಹೈದರಾಬಾದಿನಲ್ಲಿರುವ ಅಣ್ಣನ ಮನೆಗೆ ಎರಡು ದಿನದ ಮಟ್ಟಿಗೆ ಹೋಗಿಬರುವೆನೆಂದರೆ, ಅಪ್ಪ , “ಮದುವೆಯಾದ ಮೇಲೆ ಹೇಗೂ ಅಲ್ಲೇ ಇರುತ್ತಿ, ಬೇಕಾದಾಗ ಹೋಗಿ ಬಾ, ಬೇಕಾದರೆ ಆಗಲೇ ಅತ್ತಿಗೆ ಬಳಿ ಅಡಿಗೆ ಕಲಿತುಕೊ’ ಎಂದರು. 

ಇಷ್ಟು ದಿನ ನಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಮದುವೆಯಾದ ಒಬ್ಬಳೇ ಸದಸ್ಯರಾದ ಸುಜಾತಾಳನ್ನು ಆಂಟಿ ಎಂದು ಕಾಡಿಸಿದವರಲ್ಲಿ ನಾನೂ ಒಬ್ಬಳು. ನಾಳೆ ಮದುವೆಯ ನಂತರ ನನ್ನನ್ನು ಹಾಗೆ ಕರೆಯವರು ಎಂಬ ಯೋಚನೆಯೂ ಆ ದಿನಗಳಲ್ಲಿ ಇರಲಿಲ್ಲ.

ಮದುವೆಯಾದ ಮೇಲೆ ಅಮ್ಮ, ಅತ್ತೆಯೊಂದಿಗೆ ಫೋನಿನಲ್ಲಿ ಕೇಳಿ ಅಡಿಗೆ, ಮನೆಕೆಲಸ ಮಾಡುವ ಪ್ಲಾನ್‌ನಲ್ಲಿ ಮದುವೆಯತ್ತ ಹೆಜ್ಜೆ ಹಾಕಲು ಅಣಿಯಾಗಿದ್ದೇನೆ. ನಾಳೆ ನನ್ನ ಮದುವೆ, ಬರಲು ಮರೆಯದಿರಿ, ಇದು ನನ್ನ ಆತ್ಮೀಯ ಕರೆಯೋಲೆ.
ಇಂತಿ,
ಸಿಂಧೂ

ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next