ಶಿವಮೊಗ್ಗ: ರಾಜಕಾರಣಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಜನ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜಸ್ಟ್ ಆಸ್ಕಿಂಗ್ ಆಂದೋಲನ ಪ್ರಾರಂಭಿಸುತ್ತಿರುವೆ ಎಂದು ನಟ ಪ್ರಕಾಶ್ ರೈ ಹೇಳಿದರು. ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸ್ಥಿತಿಯಲ್ಲಿ ನಮ್ಮ ಹಕ್ಕಿನ ಹೋರಾಟ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಆಂದೋಲನ ಆರಂಭಿಸಲಾಗುತ್ತಿದೆ ಎಂದರು.
ಬಹುಸಂಖ್ಯಾತರಾದ ಮತದಾರರು ಅಲ್ಪಸಂಖ್ಯಾತರಾದ ರಾಜಕಾರಣಿಗಳ ಪ್ರತಿಯೊಂದು ತಪ್ಪು ನಿರ್ಧಾರಗಳನ್ನು ಪ್ರಶ್ನಿಸಬೇಕು. ಚುನಾವಣೆ ಸಮಯದಲ್ಲಿ ನೀಡಿದ ಭರವಸೆ ಈಡೇರದೆ ಇದ್ದರೆ ಮೌನವಾಗಿರಬಾರದು. ಬದಲಾಗಿ ಈ ಬಗ್ಗೆ ಪ್ರಶ್ನಿಸಬೇಕು. ಆದರೆ ಇಂದು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರನ್ನು ಈ ನಿಟ್ಟಿನಲ್ಲಿ ಕರೆದೊಯ್ಯುವ ಪ್ರಯತ್ನ ನನ್ನದು ಎಂದರು.
ಸರ್ಕಾರ ಯಾವುದೇ ಇರಲಿ. ಜನರಿಗೆ ಪ್ರಶ್ನಿಸುವ ಅಧಿಕಾರ ನೀಡಬೇಕು. ಪ್ರತಿಯೊಂದು ವಿಷಯದ ಬಗ್ಗೆ ಪ್ರಶ್ನಿಸಿದರೆ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ. ಯಾವುದೇ ಸರ್ಕಾರವನ್ನು ಪ್ರಶ್ನಿಸಲು ನಾನು ಸಿದ್ಧ. ಹಾಗೆಯೇ ಪ್ರತಿಯೊಬ್ಬರೂ ಇದಕ್ಕಾಗಿ
ಸಿದ್ಧರಾಗಬೇಕು ಎಂದರು.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅದರ ಸಿದ್ಧಾಂತವನ್ನು ಜನರ ಮೇಲೆ ಹೇರುವ ಪ್ರಯತ್ನ ನಡೆಸಬಾರದು. ನಾನು ಏನು ತಿನ್ನಬೇಕು ಎಂಬುದನ್ನು ಬೇರಾರೋ ಹೇಳುವುದು ಎಷ್ಟರ ಮಟ್ಟಿಗೆ ಸರಿ? ನನ್ನ ಆಹಾರವನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಇಂತಹ ವಿಷಯಗಳಲ್ಲಿ ಸರಕಾರ ಮಧ್ಯಪ್ರವೇಶಿಸಬಾರದು ಎಂದರು.
ಎನ್. ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರ ಕಾರ್ಯದರ್ಶಿ ನಿಂಗನಗೌಡ ಇದ್ದರು. ನಾನು ಹಿಂದೂ ವಿರೋಧಿಯಲ್ಲ. ಅಥವಾ ಕಮ್ಯುನಿಸ್ಟ್ ಕೂಡ ಅಲ್ಲ. ಆದರೆ ನಾನು ಕೋಮುವಾದಿಗಳ ವಿರುದ್ಧ ನಿಂತಿದ್ದೇನೆ. ಜಾತಿವಾದ ಕೆಟ್ಟದ್ದು. ಇದೇ ದೇಶದ ದೊಡ್ಡ ಸಮಸ್ಯೆ. ಇದನ್ನು ತೊಡೆದು ಹಾಕುವುದಕ್ಕೆ ನನ್ನ ಪ್ರಥಮ ಆದ್ಯತೆ. ಯಾರಾದರು ಕೊಲೆಯಾದರೆ ಅವರು ಹಿಂದೂ ಅಥವಾ ಮುಸಲ್ಮಾನ ಎಂದು ಹೇಳುವುದು ಸರಿಯಲ್ಲ. ಮನುಷ್ಯನ ಹತ್ಯೆ ಎಂದು ಹೇಳುವ ಸ್ಥಿತಿ ನಿರ್ಮಾಣವಾಗ ಬೇಕು.
ಪ್ರಕಾಶ್ ರೈ, ನಟ.