ಭುವನೇಶ್ವರ: ಬೆಲ್ಜಿಯಂ ಆಕ್ರಮಣವನ್ನು ಮೆಟ್ಟಿನಿಂತ ಹಾಲಿ ಚಾಂಪಿಯನ್ ಭಾರತ ಜೂನಿಯರ್ ವಿಶ್ವಕಪ್ ಹಾಕಿ ಕೂಟದ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರದ ಅಂತಿಮ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಏಕೈಕ ಗೋಲಿನಿಂದ ಬೆಲ್ಜಿಯಂ ತಂಡವನ್ನು ಮಣಿಸಿತು.
ಭಾರತದ ಸೆಮಿಫೈನಲ್ ಎದುರಾಳಿ ಜರ್ಮನಿ. ಇನ್ನೊಂದು ಸೆಮಿಫೈನಲ್‌ನಲ್ಲಿ ಆರ್ಜೆಂಟೀನಾ-ಫ್ರಾನ್ಸ್ ಎದುರಾಗಲಿವೆ. ಶುಕ್ರವಾರ ಈ ಪಂದ್ಯ ನಡೆಯಲಿದೆ.
ಬೆಲ್ಜಿಯಂ ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿತ್ತು. ಹೀಗಾಗಿ ಆರಂಭದಲ್ಲಿ ಹಿಡಿತ ಸಾಧಿಸುವಲ್ಲಿ ಭಾರತಕ್ಕೆ ಸಾಧ್ಯವಾಗಲಿಲ್ಲ. 12ನೇ ನಿಮಿಷದ ಬಳಿಕವಷ್ಟೇ ಆತಿಥೇಯರ ಆಟದಲ್ಲಿ ಜೋಶ್ ಕಂಡುಬಂತು. ಮೊದಲ ಕ್ವಾರ್ಟರ್ ಗೋಲಿಲ್ಲದೆ ಮುಗಿಯಿತು.
ದ್ವಿತೀಯ ಕ್ವಾರ್ಟರ್ ಭಾರತದ್ದಾಯಿತು. 21ನೇ ನಿಮಿಷದಲ್ಲಿ ಶಾರದಾನಂದ ತಿವಾರಿ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿ ಮುನ್ನಡೆ ಒದಗಿಸಿದರು. ಮುಂದಿನೆರಡೂ ಕ್ವಾರ್ಟರ್‌ಗಳಲ್ಲಿ ಭಾರತ ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಕೊನೆಯ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಮಾಡು-ಮಡಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿತ್ತು. 52ನೇ ಹಾಗೂ 57ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದರೂ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ವಿಫಲವಾಯಿತು.
ಇದನ್ನೂ ಓದಿ:ವಾಣಿಜ್ಯ ಎಲ್‌ಪಿಜಿ ಸಿಲಿಂಡರ್100 ರೂ. ಏರಿಕೆ
ಉಳಿದ 3 ಫಲಿತಾಂಶ
ದಿನದ ಮೊದಲ ಕ್ವಾರ್ಟರ್ ಫೈನಲ್ ಕದನದಲ್ಲಿ 6 ಬಾರಿಯ ಚಾಂಪಿಯನ್ ಜರ್ಮನಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್‌ಗೆ 3-1 ಗೋಲುಗಳಿಂದ ಆಘಾತವಿಕ್ಕಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದವು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಆರ್ಜೆಂಟೀನಾ 2-1 ಅಂತರದಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು. 3ನೇ ಮುಖಾಮುಖೀಯಲ್ಲಿ ಫ್ರಾನ್ಸ್ 4-0 ಗೋಲುಗಳಿಂದ ಮಲೇಶ್ಯವನ್ನು ಮಣಿಸಿತು.