ಕೌಲಾಲಂಪುರ: ಅಮೋಘ ಆಟದ ಪ್ರದರ್ಶನದಿಂದ ಬಲಿಷ್ಠ ನೆದರ್ಲೆಂಡ್ಸ್ ತಂಡವನ್ನು 4-3 ಗೋಲುಗಳಿಂದ ಉರುಳಿಸಿದ ಭರಾತೀಯ ತಂಡವು ಜೂನಿಯರ್ ವಿಶ್ವಕಪ್ ಹಾಕಿ ಕೂಟದ ಸೆಮಿಫೈನಲ್ ಹಂತಕ್ಕೇರಿತು.
ಮೊದಲಾರ್ಧದಲ್ಲಿ 0-2 ಮತ್ತು ಮೂರನೇ ಕ್ವಾರ್ಟರ್ ಅವಧಿಯ ಆಟದ ಮುಕ್ತಾಯಕ್ಕೆ 2-3 ಗೋಲು ಗಳಿಂದ ಹಿನ್ನೆಡೆಯಲ್ಲಿದ್ದ ಭಾರತ ತಂಡ ಆಬಳಿಕ ಶ್ರೇಷ್ಠ ಮಟ್ಟದ ಆಟದ ಪ್ರದರ್ಶನ ನೀಡಿ ಅಚ್ಚರಿಗೊಳಿಸಿತು. ಅಂತಿಮ ಅವಧಿಯಲ್ಲಿ ಮತ್ತೆರಡು ಗೋಲು ಹೊಡೆಯುವ ಮೂಲಕ ಜಯಭೇರಿ ಬಾರಿಸಿತು. ಸೆಮಿಫೈನಲ್‌ನಲ್ಲಿ ಭಾರತವು ಜಪಾನ್ ತಂಡದ ಸವಾಲನ್ನು ಎದುರಿಸಲಿದೆ.
ಕೊನೆ ಅವಧಿಯಲ್ಲಿ ಭಾರತದ ಅದ್ಭುತ ಆಟ ಮತ್ತು ರೋಹಿತ್ ಅವರ ಅಮೋಘ ನಿರ್ವಹಣೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಾಲ್ಕನೇ ಅವಧಿಯ ಆಟದ ವೇಳೆ ರೋಹಿತ್ ಎದುರಾಳಿಯ ಸತತ ಆರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ತಡೆದಿದ್ದರಿಂದ ಭಾರತ ಮೇಲುಗೈ ಸಾಧಿಸಿತು. ಈ ಪ್ರಯತ್ನಕ್ಕೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಕೊನೆಯ ಹತ್ತು ನಿಮಿಷಗಳ ಸೆಣಸಾಟ ದಲ್ಲಿ ಭಾರತ ಮುನ್ನಡೆ ಗಾಗಿ ಸರ್ವ ಪ್ರಯತ್ನ ನಡೆಸಿತು. ತಮ್ಮ ಆಟದ ವೇಗವನ್ನು ಹೆಚ್ಚಿಸಿ ಕೊಂಡ ಭಾರತೀಯರು ಗೋಲು ಹೊಡೆಯಲು ಪ್ರಯತ್ನ ಮುಂದು ವರಿಸಿದರು. 52ನೇ ನಿಮಿಷದಲ್ಲಿ ಸೌರಭ್ ಆನಂದ್ ಕುಶ್ವಾಹ ರಿಬೌಂಡ್ ಹೊಡೆತದಲ್ಲಿ ಗೋಲು ದಾಖಲಿಸಿ 3-3 ಸಮಬಲಗೊಳಿಸಿದರು. ಪಂದ್ಯ ಮುಗಿಯಲು ಮೂರು ನಿಮಿಷಗಳಿ ರುವಾಗ ತಂಡಕ್ಕೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನಾಯಕ ಉತ್ತಮ್ ಸಿಂಗ್ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದರು.
ಆರಂಭದಲ್ಲಿ ಭಾರತೀಯ ಆಟಗಾ ರರು ರಕ್ಷಣೆಯಲ್ಲಿ ಉತ್ತಮವಾಗಿ ಆಡಿದ್ದರೂ ನೆದರ್ಲೆಂಡ್ಸ್ ಎರಡು ಗೋಲು ಹೊಡೆಯಲು ಯಶಸ್ವಿ ಯಾಯಿತು. ಮೂರನೇ ಅವಧಿಯ ಆಟದ ವೇಳೆ ಭಾರತದ ಆದಿತ್ಯ ಲಾಲಗೆ ಗೋಲನ್ನು ಹೊಡೆದು 1-2ಕ್ಕೆ ತಂದರು. ಎರಡು ನಿಮಿಷಗಳ ಬಳಿಕ ಅರೈಜೀತ್ ಸಿಂಗ್ ಹುಂಡಲ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲನ್ನು ಹೊಡೆದು ಸಮಬಲ ಸಾಧಿಸಿದರು. ಈ ಅವಧಿಯ ಕೊನೆ ಹಂತದಲ್ಲಿ ಆಲಿವರ್ ಹೊರ್ಟೆನ್ಸಿಯಸ್ ಗೋಲನ್ನು ಹೊಡೆದು ತಂಡಕ್ಕೆ ಮತ್ತೆ 3-2 ಮುನ್ನಡೆ ಒದಗಿಸಿದ್ದರು.