ಬೆಂಗಳೂರು: ಶೇವ್ ಮಾಡಿಲ್ಲ ಎಂಬ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಹಲ್ಲೆಗೊಳಗಾದ ಕೇರಳ ಮೂಲದ ವಿದ್ಯಾರ್ಥಿ ಧ್ರುವ ಎಂಬಾತನ ತಂದೆ ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸರು 10 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ವಿಷ್ಣು, ಶರತ್ ಸೇರಿ ಮೂವರು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ.
ಹಲ್ಲೆ ನಡೆಸಿದವರು ವಿದ್ಯಾರ್ಥಿಗಳಾದರಿಂದ ನೋಟಿಸ್ ಕೊಡಲಾಗಿದ್ದು, ಅವರ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು. ಕೇರಳ ಮೂಲದ ವಿದ್ಯಾರ್ಥಿ ಚಿಕ್ಕ ಬೆಳ್ಳಂದೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ.
ದೊಡ್ಡ ಸಿದ್ದಾಪುರದಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಕೆಲ ತಿಂಗಳ ಹಿಂದೆ ಕಾಲೇಜಿಗೆ ಹೋದಾಗ, ಕೆಲ ಹಿರಿಯ ವಿದ್ಯಾರ್ಥಿಗಳು, ಕಾಲೇಜಿಗೆ ಶೇವ್ ಮಾಡಿಕೊಂಡು ಬರಬೇಕು ಎಂದು ತಾಕೀತು ಮಾಡಿದ್ದಾರೆ. ಆಗ ಧ್ರುವ ಸಾಧ್ಯವಿಲ್ಲ ಎಂದು ಹೇಳಿದ್ದ. ಇದೇ ವಿಚಾರಕ್ಕೆ ಆರೋಪಿತ ವಿದ್ಯಾರ್ಥಿಗಳು ಧ್ರುವಗೆ ನಾಲ್ಕೈದು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಧ್ರುವ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.
ಅದರಿಂದ ಕೋಪಗೊಂಡಿದ್ದ ಹಿರಿಯ ವಿದ್ಯಾರ್ಥಿಗಳು, ಆ.30 ರಂದು ಕರೆ ಮಾಡಿ ಸಿದ್ದಾಪುರದ ಚರ್ಚ್ ಬಳಿ ಬರುವಂತೆ ಕರೆಸಿಕೊಂಡಿದ್ದಾರೆ. ಬರುವಾಗಲೇ ಗಡ್ಡ ಹಾಗೂ ಮೀಸೆ ಟ್ರಿಮ್ ಮಾಡಿ ಕೊಂಡು ಬರಬೇಕು ಎಂದು ಸೂಚಿಸಲಾಗಿತ್ತು. ಆದರೂ ಯಾಕೆ ಹಾಗೆಯೇ ಬಂದಿರುವೆ ಎಂದಿ ದ್ದಾರೆ. ಅದನ್ನು ಧ್ರುವ ನಿರಾಕರಣೆ ಮಾಡಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ತಂದೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.