Advertisement

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ

08:59 PM Nov 30, 2021 | Team Udayavani |

ಚಾಮರಾಜನಗರ : ಕೋವಿಡ್ ಅಪಾಯ ಭತ್ಯೆಯನ್ನು ಕೂಡಲೇ ಪಾವತಿಸಬೇಕು ಹಾಗೂ ಇಂಟರ್ನಿಗಳಿಗೆ ಸಮಯಕ್ಕೆ ಸರಿಯಾಗಿ ಸ್ಟೈಫಂಡ್ ನೀಡಬೇಕೆಂದು ಆಗ್ರಹಿಸಿ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಸಿಮ್‌ಸ್) ಕಿರಿಯ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರೆಸಿದ್ದು, ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಭುವನೇಶ್ವರಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾ ಸ್ಪತ್ರೆಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ನೂತನ ಆಸ್ಪತ್ರೆಗೆ ತೆರಳಿ ಪ್ರತಿಭಟನೆಯನ್ನು ಮುಂದುವರಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕೊ್ರೀಶ ವ್ಯಕ್ತಪಡಿಸಿದರು.

ನಗರದ ವೈದ್ಯಕೀಯ ಕಾಲೇಜಿನಲ್ಲಿ 136 ಮಂದಿ ಕಿರಿಯ ವೈದ್ಯರಿದ್ದು, ತುರ್ತು ಚಿಕಿತ್ಸಾ ವಿಭಾಗದವರನ್ನು ಹೊರತುಪಡಿಸಿ ಉಳಿದ ವೈದ್ಯರು ಕರ್ತವ್ಯದಿಂದ ದೂರ ಉಳಿದು ಪ್ರತಿಭಟಿಸಿದರು.
ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಆರೋಗ್ಯ ರಕ್ಷಣಾ ಕಾರ್ಯಕರ್ತರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಶ್ರಮಿಸಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರು ವೈದ್ಯರನ್ನು ಕೋವಿಡ್ ಯೋಧರೆಂದು ಕರೆಯುತ್ತಾರೆ. ರಾಜ್ಯ ಸರ್ಕಾರವು ಎಲ್ಲ ನಿವಾಸಿ ವೈದ್ಯರಿಗೆ ಮತ್ತು ಇಂಟರ್ನಿ ವೈದ್ಯರಿಗೆ ಏಪ್ರಿಲ್ ತಿಂಗಳಿನಿಂದ ತಿಂಗಳಿಗೆ 10 ಸಾವಿರ ರೂ. ಕೋವಿಡ್ ಭತ್ಯೆಯನ್ನು ಘೋಷಿಸಿತು. ಆದರೆ, ಘೋಷಿಸಿ 6 ತಿಂಗಳೂ ಕಳೆದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಆ ಮೂಲಕ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಬಗ್ಗೆ ಅಸ್ಪಷ್ಟ ನಿರ್ಲಕ್ಷ್ಯತೋರಿಸಲಾಗುತ್ತಿದೆ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರು ದೂರಿದರು.

ಇದನ್ನೂ ಓದಿ : ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ನ.9 ರಂದು ಮೈಸೂರಿನ ನಿವಾಸಿ ವೈದ್ಯರು ತುರ್ತು ಸೇವೆಗಳಿಗೆ ಅಡ್ಡಿಯಾಗದಂತೆ ಅನಿಧಿಷ್ಟಾವಧಿ ಮುಷ್ಕರ ನಡೆಸಿದ್ದರು. ಈ ವೇಳೆ ಮುಂದಿನ 10 ದಿನಗಳ ಅವಧಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರು ಭರವಸೆ ನೀಡಿದ್ದರಿಂದ ಮುಷ್ಕರವನ್ನು ವಾಪಸ್ಸು ಪಡೆಯಲಾಗಿತ್ತು. ಆದರೆ, ವೈದ್ಯಕೀಯ ಶಿಕ್ಷಣ ಸಚಿವರ ಭರವಸೆ ಇನ್ನೂ ಈಡೇರಿಲ್ಲ. ಆದ್ದರಿಂದ ನಮ್ಮ ಬೇಡಿಕೆ ಈಡೇರುವ ತನಕ ರಾಜ್ಯಾದ್ಯಂತ ಅನಿಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಪ್ರತಿಭಟನೆಯಲ್ಲಿ ಸಿಮ್‌ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಧೀಮಂತ್, ಉಪಾಧ್ಯಕ್ಷೆ ಡಾ.ಸಹನಾ, ಪದಾಧಿಕಾರಿಗಳಾದ ಡಾ.ಮೋಹನ್, ಡಾ.ತೇಜಸ್ವಿ ಅರುಣ್, ಡಾ.ಗಣೇಶ್, ಡಾ.ಆಸ್ತಾ, ಡಾ.ಹರ್ಷಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next