ಶ್ರೀನಿವಾಸಪುರ(ಕೋಲಾರ): ಶಿಕ್ಷಣದಿಂದ ವಂಚಿತರಾಗಿ ಎರಡು ತಿಂಗಳಿನಿಂದ ತಮ್ಮ ಪೋಷಕರೊಂದಿಗೆ ಕಾಡಿನಲ್ಲಿದ್ದ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಶಿಕ್ಷಣ ಇಲಾಖೆ ಜತೆ ಇತರೆ ಇಲಾಖೆಗಳ ಅಧಿಕಾರಿಗಳೂ ಸತತ ನಾಲ್ಕು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೂಲಿ ಕಾರ್ಮಿಕರು ಮತ್ತು ಮೇಸ್ತ್ರಿಯ ಮನವೊಲಿಕೆ ಪ್ರಯತ್ನ ನಡೆಸಿದ್ದರು.
ಅಂತಿಮವಾಗಿ ಶನಿವಾರ 8 ಮಕ್ಕಳು ಕೊಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ, ಇತರೆ ಮಕ್ಕಳ ಜತೆ ಬೆರೆತು ಆಟ, ಪಾಠದ ಜತೆಗೆ ಬಿಸಿಯೂಟವನ್ನೂ ಸವಿದರು. ಈ ಮಕ್ಕಳು ಶಿಕ್ಷಣದಿಂದ ದೂರವಿರುವ ಬಗ್ಗೆ
“ಉದಯವಾಣಿ’ ನಿರಂತರವಾಗಿ ಸುದ್ದಿ ಪ್ರಕಟಿಸಿತ್ತು.
ʼ
ಈ ಮಕ್ಕಳು ಯಾರು?: ತಾಲೂಕಿನ ಕೊಳ್ಳೂರು ಮೂಲಕ ದೊಡಮಲದೊಡ್ಡಿಗೆ ಹೋಗುವ ರಸ್ತೆಯಲ್ಲಿನ ಕಾಡಿನಲ್ಲಿ, ನೀಲಗಿರಿ ಮರಗಳನ್ನು ಕಡಿಯಲು ಮೇಸ್ತ್ರಿ ಶಂಕರ್ ಎಂಬಾತ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಈ ಕೂಲಿ ಕಾರ್ಮಿಕರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ.
ಕಾಡಿನಲ್ಲೇ ಟೆಂಟ್‌ಗಳನ್ನು ಹಾಕಿಕೊಂಡಿರುವ ಕೂಲಿ ಕಾರ್ಮಿಕರು, ತಮ್ಮ ಪತ್ನಿ, ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಹೀಗೆ ವಲಸೆ ಬಂದ ಈ ಕೂಲಿಕಾರ್ಮಿಕರ ಪೈಕಿ 15ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುವವರಾಗಿದ್ದಾರೆ.