Advertisement

HSRP ನೋಂದಣಿಗೆ ಜೂನ್‌ 12 ಅಂತಿಮ ದಿನ: ವಾಹನ ಸವಾರರ ಮುಗಿಯದ ಗೋಳು

12:25 AM May 31, 2024 | Team Udayavani |

ಮಂಗಳೂರು/ಉಡುಪಿ:  ದೇಶಾದ್ಯಂತ ಅತೀ ಸುರಕ್ಷಾ ನೋಂದಣಿ ಫ‌ಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಹಲವಾರು ಮಂದಿ ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿದ್ದರೂ ಇನ್ನು ಕೆಲವು ಮಂದಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಪೊಲೀಸ್‌ ಠಾಣೆಯ ಮೆಟ್ಟಿಲು ಏರುವಂತಾಗಿದೆ!

Advertisement

ಸರಕಾರವು ಖಾಸಗಿ ಸಂಸ್ಥೆಗಳಿಗೆ ನಂಬರ್‌ಪ್ಲೇಟ್‌ ಮಾಡುವ ಹೊಣೆಗಾರಿಕೆ ನೀಡಿದ್ದು, ಕೆಲವು ಗ್ರಾಹಕರು ನೀಡಿದ ದಾಖಲೆ ಸಮರ್ಪಕವಾಗಿದ್ದರೂ ನಂಬರ್‌ ಪ್ಲೇಟ್‌ ಅದಲು ಬದಲಾಗಿ ಬಂದಿದೆ. ಕೆಲವರು ಅದನ್ನು ಸರಿಪಡಿಸಿದರೂ ಇನ್ನು ಕೆಲವು ಪ್ರಕ್ರಿಯೆ ಹಂತದಲ್ಲಿಯೇ ಬಾಕಿ ಉಳಿದಿವೆ. ಜೂನ್‌ 12ರಂದು ಅಂತಿಮ ದಿನವಾಗಿದ್ದು, ಬಳಿಕ ದಂಡ ವಿಧಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿರುವುದರಿಂದ ವಾಹನ ಮಾಲಕರು ನೋಂದಣಿ ಫ‌ಲಕ ಬದಲಿಸಲು ಈಗ ಮನಸ್ಸು ಮಾಡುತ್ತಿದ್ದಾರೆ.

ಸಮಸ್ಯೆ ಹೇಗೆ?
ಎಚ್‌ಎಸ್‌ಆರ್‌ಪಿ ನೋಂದಣಿ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ವಾಹನದ ವಿವರ ಹಾಕುವಾಗ ಗ್ರಾಹಕರೇ ತಪ್ಪು ಮಾಹಿತಿ ನೀಡಿದ ಪ್ರಕರಣಗಳು ಹಾಗೂ ಗ್ರಾಹಕರು ಸರಿ ಮಾಹಿತಿ ನೀಡಿ ನೋಂದಣಿ ಸಂಖ್ಯೆ ಬಂದಾಗ ಒಂದು ಸಂಖ್ಯೆ ಅದಲು ಬದಲಾಗುವ ಘಟನೆಗಳು ರಾಜ್ಯಾದ್ಯಂತ ಬಹಳಷ್ಟು ವರದಿಯಾಗಿವೆ. ಉಡುಪಿ ಜಿಲ್ಲೆಯಲ್ಲಿಯೂ ಅಂತಹ ನೂರಾರು ಪ್ರಕರಣಗಳು ವಿವಿಧ ಶೋರೂಂಗಳಲ್ಲಿ ನಡೆದಿವೆ. ನಂಬರ್‌ ಪ್ಲೇಟ್‌ನಲ್ಲಿ ಬದಲಾವಣೆ ಇದ್ದರೆ ಆ ಪ್ರಕ್ರಿಯೆ ಬಹಳಷ್ಟು ವಿಳಂಬಗತಿಯಲ್ಲಿ ಸಾಗುತ್ತಿದೆ.

ಎಫ್ಐಆರ್‌ ಪ್ರತಿ ಕಡ್ಡಾಯ: 2019ರ ಬಳಿಕ ನೋಂದಣಿಯಾದ ವಾಹನಗಳು ರಸ್ತೆಗಿಳಿಯುವಾಗಲೇ ಸಂಬಂಧಪಟ್ಟ ಸಂಸ್ಥೆ ಎಚ್‌ಎಸ್‌ಆರ್‌ಪಿ ನೋಂದಣಿ ಫ‌ಲಕ ನೀಡುತ್ತದೆ. ಅದಕ್ಕೂ ಮುನ್ನ ನೋಂದಣಿಯಾದ ವಾಹನಗಳು ಒಂದು ಬಾರಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ಅರ್ಜಿ ಸಲ್ಲಿಸಿ ತಪ್ಪಾಗಿ ಬಂದಲ್ಲಿ ಮತ್ತೆ ಸಲ್ಲಿಸಬೇಕಾದರೆ ಎಫ್ಐಆರ್‌ ಪ್ರತಿ ಕಡ್ಡಾಯವಾದ ಕಾರಣ ಗ್ರಾಹಕರು ಪೊಲೀಸ್‌ ಠಾಣೆಗೆ ತೆರಳುವಂತಾಗಿದೆ. ಆದರೆ ಪೊಲೀಸರಿಗೂ ಸುಖಾಸುಮ್ಮನೆ ಎಫ್ಐಆರ್‌ ದಾಖಲಿಸುವ ಅಧಿಕಾರ ಇಲ್ಲದ ಕಾರಣ ಕೆಲವು ಮಂದಿ ವಾಹನ ಕಳವಾಗಿದೆ ಎಂಬ ದೂರು ನೀಡಿ ಎಫ್ಐಆರ್‌ ಮಾಡಿಸಿಕೊಳ್ಳುತ್ತಿದ್ದಾರೆ.

ಎಚ್‌ಎಸ್‌ಆರ್‌ಪಿ ಉಪಯೋಗ
ಈ ನೋಂದಣಿ ಫ‌ಲಕದಲ್ಲಿ ವಾಹನದ ಎಲ್ಲ ಮಾಹಿತಿಗಳೂ ಅಡಕವಾಗಿರುತ್ತವೆ. ವಾಹನ ಕಳವಾದರೆ ಸುಲಭದಲ್ಲಿ ಹುಡುಕಬಹುದು. ಕಳ್ಳತನವಾಗುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಬಳಕೆಯಾಗುವುದನ್ನು ತಡೆಗಟ್ಟಲು ಸಾಧ್ಯವಿದೆ. ನಂಬರ್‌ ಪ್ಲೇಟ್‌ಗಳನ್ನು ಅನಧಿಕೃತವಾಗಿ ಬದಲಾಯಿಸುವುದು ಅಸಾಧ್ಯ. ಇದರ ಮಾಹಿತಿಯನ್ನು ತಿದ್ದಲೂ ಸಾಧ್ಯವಿಲ್ಲ.

Advertisement

ಏನು ಮಾಡಬೇಕು?
ಒಂದು ವೇಳೆ ತಪ್ಪು ಸಂಖ್ಯೆ ಮುದ್ರಿತ ನಂಬರ್‌ ಪ್ಲೇಟ್‌ ಬಂದರೆ ಆನ್‌ಲೈನ್‌ ಮೂಲಕವೇ ಸರಿಪಡಿಸಲು ಸಾಧ್ಯವಿದೆ. https://bookmyhsrp.com ವೆಬ್‌ಸೈಟ್‌ಗೆ ತೆರಳಬೇಕು. ಅಲ್ಲಿ ರೀಪ್ಲೇಸ್‌ಮೆಂಟ್‌/ರಿಟೈನ್‌/ಟ್ರಾನ್ಸ್‌ಫರ್‌ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ರಾಜ್ಯ, ನೋಂದಣಿ ಸಂಖ್ಯೆ, ವಾಹನದ ಚಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ಮತ್ತು ಕ್ಯಾಪಾc ಕೋಡ್‌ ಹಾಕಿ ಕ್ಲಿಕ್‌ ಮಾಡಬೇಕು. ಮುಂದಿನ ಸೂಚನೆಯನ್ನು ಪಾಲಿಸಿ, ಬಳಿಕ ತಪ್ಪಾಗಿ ಮುದ್ರಿತ ನಂಬರ್‌ ಪ್ಲೇಟ್‌, ಸಂಬಂಧಿತ ದಾಖಲೆಯನ್ನು ನಮೂದು ಮಾಡಬೇಕು. ಅಥವಾ ಸೂಕ್ತ ದಾಖಲೆಗಳೊಂದಿಗೆ online@bookmyhsrp.com ಇ-ಮೈಲ್‌ ಐಡಿಗೆ ಮೈಲ್‌ ಮಾಡಬಹುದು. 10 ದಿನಗಳ ಒಳಗಾಗಿ ಉಚಿತವಾಗಿ ಹೊಸ ನಂಬರ್‌ ಪ್ಲೇಟ್‌ ಕಳುಹಿಸಲಾಗುತ್ತದೆ ಎಂದು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಸಂಬಂಧಿತ ಗ್ರಾಹಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಫ‌ಲಕದ ಬದಲು ಬಿಳಿ ಫ‌ಲಕ!
ಟೂರಿಸ್ಟ್‌ ವಾಹನಗಳಿಗೆ ಹಳದಿ ಫ‌ಲಕದ ಬದಲು ವೈಟ್‌ ಬೋರ್ಡ್‌ ನೋಂದಣಿ ಸಂಖ್ಯೆ ಹಾಗೂ ವೈಟ್‌ ಬೋರ್ಡ್‌ ವಾಹನಗಳಿಗೆ ಯೆಲ್ಲೋ ಬೋರ್ಡ್‌ ನೋಂದಣಿ ಸಂಖ್ಯೆ ಬಂದ ಉದಾಹರಣೆಗಳೂ ನಡೆದಿವೆ. ಆದರೆ ಇದಕ್ಕೆ ಎಫ್ಐಆರ್‌ ಕೂಡ ಅನ್ವಯವಾಗದು! ಈ ಬಗ್ಗೆ ವಾಹನ ಮಾರಾಟಗಾರರು ಸಂಬಂಧಪಟ್ಟ ಎಚ್‌ಎಸ್‌ಆರ್‌ಪಿ ಸಂಸ್ಥೆಯ ಪ್ರಮುಖರೊಂದಿಗೆ ಹಲವಾರು ಬಾರಿ ಮಾತುಕತೆ ನಡೆಸಿದರೂ ಭರವಸೆಯೊಂದಿಗೆ ಕೊನೆಕೊಂಡಿದೆ ವಿನಾಃ ಯಾವುದೇ ಫ‌ಲಿತಾಂಶ ನೀಡಿಲ್ಲ.

ಎಚ್‌ಎಸ್‌ಆರ್‌ಪಿ ನೋಂದಣಿ ಸಂಖ್ಯೆಯ ಗೊಂದಲದ ಬಗ್ಗೆ ಈಗಾಗಲೇ ಕೆಲವು ದೂರುಗಳು ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಏಜೆನ್ಸಿಯವರಿಗೂ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಲಾಗಿದೆ. ಇದನ್ನು ಸರಳ ರೀತಿಯಲ್ಲಿ ಸರಿಪಡಿಸುವ ಬಗ್ಗೆ ಶೀಘ್ರದಲ್ಲಿಯೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. -ಎಲ್‌.ಪಿ. ನಾಯಕ್‌, ಎಆರ್‌ಟಿಒ, ಉಡುಪಿ

 ನವೀನ್‌ ಇಳಂತಿಲ / ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next