ಪ್ರಸಕ್ತ ವರ್ಷದ ನವೆಂಬರ್‌ನಲ್ಲಿ ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳ ತಿಂಗಳ ರಿಟೇಲ್ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.
Advertisement
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 18. 46ರಷ್ಟು ಏರಿಕೆಯಾಗಿದೆ. ಹಬ್ಬದ ಋತು ಮುಗಿಯುತ್ತಿದ್ದಂತೆಯೇ ವಾಹನಗಳ ರಿಟೇಲ್ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆಯಾದರೂ ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡ ಬಳಿಕ ಉದ್ಯಮ ಕ್ಷೇತ್ರದಲ್ಲಿ ಕಂಡುಬಂದಿರುವ ಪ್ರಗತಿ, ವಿವಾಹ ಋತು ಆರಂಭಗೊಂಡಿರುವುದು ಮತ್ತು ಹೊಸವರ್ಷ ಸಮೀಪಿಸುತ್ತಿರುವುದು ವಾಹನ ಮಾರುಕಟ್ಟೆಯನ್ನು ಮತ್ತೆ ಹಳಿಗೆ ತರುವ ವಿಶ್ವಾಸ ಮೂಡಿಸಿದೆ.
ವಾಹನಗಳ ಮಾರಾಟದಲ್ಲಿ ಹೆಚ್ಚಳ
ಈ ವರ್ಷದ ನವೆಂಬರ್‌ನಲ್ಲಿ ಒಟ್ಟಾರೆ 28,54,242 ವಾಹನಗಳು ಮಾರಾಟವಾಗಿದ್ದರೆ, ಕಳೆದ ವರ್ಷದ ನವೆಂಬರ್‌ನಲ್ಲಿ 24,09,535 ವಾಹನಗಳು ಮಾರಾಟ ವಾಗಿದ್ದವು. ಕಳೆದ ವರ್ಷದ ನವೆಂಬರ್‌ನಲ್ಲಿ 3,07, 550 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‌ನಲ್ಲಿ 3,60,242 ಪ್ರಯಾಣಿಕ ವಾಹನಗಳ ಮಾರಾಟ ವಾಗುವ ಮೂಲಕ ಶೇ. 17ರಷ್ಟು ಹೆಚ್ಚಳ ದಾಖಲಿಸಿದೆ. ಇನ್ನು ಕಳೆದ ನವೆಂಬರ್‌ನಲ್ಲಿ 18,56,108 ದ್ವಿಚಕ್ರ ವಾಹನಗಳ ಮಾರಾಟವಾಗಿದ್ದರೆ ಈ ವರ್ಷ 22,47,366 ದ್ವಿಚಕ್ರ ವಾಹನಗಳು ಮಾರಾಟ ವಾಗುವ ಮೂಲಕ ಶೇ. 21ರಷ್ಟು ಏರಿಕೆ ಕಂಡಿದೆ ಎಂದು ಆಟೋಮೊಬೈಲ್ ಡೀಲರ್ ಅಸೋಸಿಯೇಶನ್‌ಗಳ ಫೆಡರೇಶನ್(ಎಫ್ಎಡಿಎ) ತಿಳಿಸಿದೆ. ಎಫ್ಡಿಎಯು ದೇಶಾದ್ಯಂತದ 15,000 ಆಟೋಮೊಬೈಲ್ ಡೀಲರ್‌ಗಳ 30,000ಕ್ಕೂ ಅಧಿಕ ವಾಹನ ಮಾರಾಟ ಮಳಿಗೆಗಳನ್ನು ಪ್ರತಿನಿಧಿಸುತ್ತಿದೆ. ವಾಹನ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ
ದೀಪಾವಳಿ ಹಬ್ಬ ಮತ್ತು ವಾಹನ ತಯಾರಿಕ ಕಂಪೆನಿಗಳು ಅತ್ಯಾಧುನಿಕ ಮತ್ತು ಸುಧಾರಿತ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದುದು ಒಟ್ಟಾರೆ ವಾಹನ ಮಾರುಕಟ್ಟೆ ಚಿಗಿತುಕೊಳ್ಳಲು ಪ್ರಮುಖ ಕಾರಣಗಳಾಗಿವೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ವಾಹನ ಖರೀದಿಗೆ ಹೆಚ್ಚಿನ ಆಸಕ್ತಿ ತೋರುವುದು ಸಹಜ ಪ್ರಕ್ರಿಯೆಯಾಗಿದ್ದು ಬೇಡಿಕೆಗಳು ಹೆಚ್ಚುತ್ತವೆ. ಇದಕ್ಕನುಗುಣವಾಗಿ ವಾಹನ ತಯಾರಿಕ ಕಂಪೆನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಧಾರಿತ ಮಾಡೆಲ್‌ಗಳನ್ನು ಪರಿಚಯಿಸಿದುದು ಕೂಡ ಮಾರುಕಟ್ಟೆ ಚಿಗಿತುಕೊಳ್ಳಲು ಧನಾತ್ಮಕ ಅಂಶವಾಗಿ ಪರಿಣಮಿಸಿತು.
Related Articles
ಮಾರ್ಚ್‌ನಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಮಾರಾಟ ಗೊಂಡಿದ್ದವು. ಇದಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ 1.77 ಲಕ್ಷ ಅಧಿಕ ದ್ವಿಚಕ್ರ ವಾಹನಗಳು ಮಾರಾಟ ವಾಗಿವೆ. ಇನ್ನು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ 2022ರ ಅಕ್ಟೋಬರ್‌ನಲ್ಲಿ ಗರಿಷ್ಠ ವಾಹನಗಳು ಮಾರಾಟ ವಾಗಿದ್ದವು. ಆದರೆ ನವೆಂಬರ್‌ನಲ್ಲಿ ಇದಕ್ಕಿಂತ 4,000 ಅಧಿಕ ವಾಹನಗಳು ಹೊಸದಾಗಿ ನೋಂದಣಿಯಾಗಿವೆ.
Advertisement
ದ್ವಿಚಕ್ರ ವಾಹನಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಈಗ ವಿವಾಹ ಋತು ಆರಂಭವಾಗಿದ್ದು ದ್ವಿಚಕ್ರ ವಾಹನಗಳ ಮಾರಾಟ ಮತ್ತಷ್ಟು ಚುರುಕು ಪಡೆಯುವ ನಿರೀಕ್ಷೆ ಇದೆ. ಆದರೆ ಗ್ರಾಮೀಣ ಆರ್ಥಿಕತೆಯ ಮುಖ್ಯ ಆಧಾರಸ್ತಂಭವಾಗಿರುವ ರಬಿ ಋತುವಿನ ಬೆಳೆಯ ಮೇಲೆ ಸದ್ಯದ ಪ್ರತಿಕೂಲ ಹವಾಮಾನ ಪರಿಸ್ಥಿತಿಯು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಜನರ ಆದಾಯಕ್ಕೆ ಪೆಟ್ಟು ಬೀಳುವ ಲಕ್ಷಣಗಳು ಗೋಚರಿಸುತ್ತಿದೆ. ಇದು ವಾಹನ ಮಾರುಕಟ್ಟೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಎಫ್ಎಡಿಎ ಹೇಳಿದೆ.
ನವೆಂಬರ್‌ನಲ್ಲಿ ದಾಖಲೆ ಮಾರಾಟಈ ವರ್ಷದ ನವೆಂಬರ್ ತಿಂಗಳು, ದೇಶದ ಆಟೋ ಮೊಬೈಲ್ ಮಾರುಕಟ್ಟೆ ಪಾಲಿಗೆ ಶುಭ ಮಾಸವಾಗಿತ್ತು. ಈ ಮಾಸದಲ್ಲಿ ದೇಶಾದ್ಯಂತ ಒಟ್ಟು 28.54ಲಕ್ಷ ವಾಹನಗಳು ಮಾರಾಟಗೊಂಡಿವೆ. ಈ ಹಿಂದೆ ಅಂದರೆ 2020ರ ಮಾರ್ಚ್ ನಲ್ಲಿ 25.69 ಲಕ್ಷ ವಾಹನಗಳು ಮಾರಾಟವಾಗಿದ್ದುದು ಈವರೆಗಿನ ದಾಖಲೆಯಾಗಿತ್ತು. ಟ್ರ್ಯಾಕ್ಟರ್, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇಳಿಕೆ
ಟ್ರ್ಯಾಕ್ಟರ್ ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗಿದೆ. ಮಳೆಕೊರತೆ, ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿರುವುದರಿಂದ ಬೇಡಿಕೆಯಲ್ಲಿ ಕುಸಿತ ಕಂಡುಬಂದಿದೆ. ಅಷ್ಟು ಮಾತ್ರವಲ್ಲದೆ ಈ ವಾಹನಗಳ ಲಭ್ಯತೆಯಲ್ಲೂ ಕೊರತೆ ಉಂಟಾಗಿದ್ದು, ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ವಾಹನಗಳನ್ನು ಪೂರೈಸಲು ಅಸಾಧ್ಯವಾದುದು ಕೂಡ ಇವುಗಳ ಮಾರಾಟ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ. ಇದರ ಹೊರತಾಗಿಯೂ ಮುಂದಿನ ದಿನಗಳಲ್ಲಿ ವಾಣಿಜ್ಯ ವಾಹನಗಳ ಮಾರಾಟ ಚೇತರಿಕೆ ಕಾಣುವ ನಿರೀಕ್ಷೆಯನ್ನು ಡೀಲರ್‌ಗಳು ವ್ಯಕ್ತಪಡಿಸಿದ್ದಾರೆ. ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ವಾಣಿಜ್ಯ ಚಟುವಟಿಕೆಗಳು ಬಿರುಸುಗೊಳ್ಳಲಿರುವ ಸಾಧ್ಯತೆ ಇರುವುದರಿಂದ ಹಾಗೂ ಕಲ್ಲಿದ್ದಲು ಮತ್ತು ಸಿಮೆಂಟ್ ವ್ಯಾಪಾರ ಬಿರುಸು ಪಡೆದಿರುವುದು ಕೂಡ ವಾಣಿಜ್ಯ ವಾಹನಗಳ ಮಾರಾಟ ಒಂದಿಷ್ಟು ಏರಿಕೆಯನ್ನು ಕಾಣುವ ನಿರೀಕ್ಷೆಯನ್ನು ಹುಟ್ಟಿಸಿದೆ. ಇದೇ ವೇಳೆ ಖಾಸಗಿ ವಾಹನಗಳ ಮಾರಾಟವೂ ಬಿರುಸು ಪಡೆದುಕೊಳ್ಳುವ ಆಶಾವಾದವನ್ನು ಆಟೋಮೊಬೈಲ್ ಕ್ಷೇತ್ರದ ಪರಿಣತರು ವ್ಯಕ್ತಪಡಿಸಿದ್ದಾರೆ. ಇ.ವಿ. ಮಾರಾಟದಲ್ಲಿಯೂ ತೇಜಿ
ನವೆಂಬರ್‌ನಲ್ಲಿ ಎಲೆಕ್ಟ್ರಿಕಲ್ ವಾಹನ (ಇ.ವಿ.)ಗಳ ರಿಟೇಲ್ ಮಾರಾಟ ದಲ್ಲಿಯೂ ಶೇ. 25.5ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 1.21 ಇ.ವಿ.ಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‌ನಲ್ಲಿ ಒಟ್ಟು 1.52ಲಕ್ಷ ಇ.ವಿ.ಗಳು ಮಾರಾಟವಾಗಿವೆ. ಇದೇ ವೇಳೆ 91,243 ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನಗಳು ಮಾರಾಟವಾಗುವ ಮೂಲಕ ಶೇ.18.82 ಏರಿಕೆ ಕಂಡಿದೆ. ಇನ್ನು ಎಲೆಕ್ಟ್ರಾನಿಕ್ ತ್ರಿಚಕ್ರ ವಾಹನಗಳ ಮಾರಾಟದಲ್ಲಿಯೂ ಹೆಚ್ಚಳವಾಗಿದ್ದು ಈ ವರ್ಷದ ನವೆಂಬರ್‌ನಲ್ಲಿ 53, 766 ಇ.ವಿ. ತ್ರಿಚಕ್ರ ವಾಹನಗಳು ಮಾರಾಟವಾಗುವ ಮೂಲಕ ಶೇ. 32.37ರಷ್ಟು ಹೆಚ್ಚಳ ದಾಖಲಿಸಿದೆ. 7, 064 ಪ್ರಯಾಣಿಕ ವಾಹನಗಳು ಮತ್ತು 533 ಇ-ಬಸ್‌ಗಳು ನವೆಂಬರ್‌ನಲ್ಲಿ ಮಾರಾಟವಾಗಿದ್ದು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಕ್ರಮವಾಗಿ ಶೇ. 77.35 ಮತ್ತು ಶೇ. 162ರಷ್ಟು ಏರಿಕೆಯಾಗಿದೆ. ಮತ್ತೆ ಚೇತರಿಕೆ ಕಾಣುವ ವಿಶ್ವಾಸ
ಹಬ್ಬದ ಋತು ಮುಗಿಯುತ್ತಿದ್ದಂತೆಯೇ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರತೊಡಗಿದೆ. ಬೇಡಿಕೆ ಕಡಿಮೆಯಾಗಿರುವುದು ವಾಹನಗಳ ಪೂರೈಕೆ ಮೇಲೂ ಪರಿಣಾಮ ಬೀರಿದೆ. ವರ್ಷಾಂತ್ಯದ ಕೊಡುಗೆಗಳು, ಬೆಲೆಯಲ್ಲಿ ರಿಯಾಯಿತಿ, ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಮತ್ತು ವಾಹನಗಳ ಪೂರೈಕೆಯಲ್ಲಿ ಹೆಚ್ಚಳದ ಸಾಧ್ಯತೆಗಳ ಹಿನ್ನೆಲೆಯಲ್ಲಿ ದ್ವಿಚಕ್ರ, ಖಾಸಗಿ, ವಾಣಿಜ್ಯ ಸಹಿತ ಎಲ್ಲ ವಾಹನಗಳ ಮಾರಾಟ ಚೇತರಿಕೆಯನ್ನು ಕಾಣಲಿದೆ ಎಂಬ ವಿಶ್ವಾಸ ವಾಹನಗಳ ಡೀಲರ್‌ಗಳದ್ದಾಗಿದೆ.