Advertisement

ಜು.7: ಕರಿಮೆಣಸು ದುರುಪಯೋಗ ಆರೋಪಿಸಿ ಪ್ರತಿಭಟನೆ

03:45 AM Jul 06, 2017 | |

ಮಡಿಕೇರಿ: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘ‌ದಲ್ಲಿ ನಡೆದಿರುವ ಭಾರೀ ಪ್ರಮಾಣದ ಕರಿಮೆಣಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಜು. 7 ರಂದು ನಗರದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಲು ಕಾವೇರಿಸೇನೆ ನಿರ್ಧರಿಸಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ತಿಳಿಸಿದ್ದಾರೆ.

Advertisement

ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘ‌ದ ಕೆಲವು ಸದಸ್ಯರುಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕು ತಿಂಗಳ ಹಿಂದೆ ಸಹಕಾರ ಸಂಘದ ಗೋದಾಮಿನಲ್ಲಿರಿಸಿದ್ದ ಕರಿಮೆಣಸಿನ ದಾಸ್ತಾನಿನ‌ ಪೈಕಿ 100 ಚೀಲ ಕರಿಮೆಣಸು ದುರುಪಯೋಗವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಕಳೆದ ಎ. 3ರಂದು ಸಹಕಾರ ಸಂಘಗಳ ಉಪನಿಬಂಧಕರಿಗೆ ಲಿಖೀತ ದೂರನ್ನು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಮೂರು ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಕರಿಮೆಣಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳದೆ ಜಾಣ ಮೌನವನ್ನು ಪ್ರದರ್ಶಿಸುತ್ತಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೆೇರಿಯ ಧೋರಣೆ ಗಮನಿಸಿದಾಗ, ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ರಘು ಮಾಚಯ್ಯ ಆರೋಪಿಸಿದರು. ಪ್ರಕರಣದ ತನಿಖೆಗೆ ಆಗ್ರಹಿಸಿ ನಡೆಸುವ ಮುಷ್ಕರಕ್ಕೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ವಿರುದ್ಧವೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಕೇವಲ ಮಾಲ್ದಾರೆ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳಲ್ಲಿ ದುರುಪಯೋಗವಾಗುತ್ತಿದ್ದರೂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಕೆೇವಲ ಸದಸ್ಯರು ಬೆಳೆದ ಕರಿಮೆಣಸು ಮಾತ್ರವಲ್ಲದೆ ವರ್ತಕರು ನೀಡುವ ಕರಿಮೆಣಸನ್ನು ದಾಸ್ತಾನಿಟ್ಟುಕೊಳ್ಳುವುದು ನಿಯಮ ಬಾಹಿರ ಕ್ರಮವಾಗಿದೆ ಎಂದು ರಘುಮಾಚಯ್ಯ ಟೀಕಿಸಿದರು.

ಸಹಕಾರ ಸಂಘದ ಸದಸ್ಯರು ಹಾಗೂ ಮಾಲ್ದಾರೆ ಗ್ರಾ. ಪಂ.ಮಾಜಿ ಅಧ್ಯಕ್ಷ ವಿಜು ಬಿದ್ದಪ್ಪ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘದ ಸದಸ್ಯರಾದ ವಿ.ಕೆ. ಗಣಪತಿ, ಎಂ.ಎಸ್‌. ಗಣೇಶ್‌, ರಾಘವ ಹಾಗೂ ಫ್ರಾನ್ಸಿಸ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next